Saturday, 14th December 2024

ದೇವಾಲಯ ಜೀರ್ಣೋದ್ಧಾರಕ್ಕೆ ಅರಣ್ಯ ಇಲಾಖೆ ಅಧಿಕಾರಿ ಅಡ್ಡಿ 

ತುಮಕೂರು: ಬೆಳಗುಂಬದಿಂದ ದೇವರಾಯನ ದುರ್ಗಾ ರಸ್ತೆ ಮಾರ್ಗದಲ್ಲಿ ಸಿಗುವ ಮುತ್ತುರಾಯ ಸ್ವಾಮಿ ದೇವಸ್ಥಾನ ಪಾಳು ಬಿದ್ದಿದ್ದು ಸುತ್ತ ಮುತ್ತಲಿನ ಗ್ರಾಮಸ್ಥರು ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ, ಆದರೆ ಈ ಕಾರ್ಯಕ್ಕೆ ಅರಣ್ಯ ಇಲಾಖೆ ಅಧಿಕಾರಿ ಅಡ್ಡಿಪಡಿಸಿದ್ದಾರೆ.
ದೇವಸ್ಥಾನದ ಮೇಲೆ ಚಿಕ್ಕ ಗೋಪುರ ನಿರ್ಮಾಣ ಮಾಡಲು ಮುಂದಾದ ಗ್ರಾಮಸ್ಥರ ವಿರುದ್ಧ ಆರ್‌ಎಫ್‌ಒ ಪವಿತ್ರ ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ, ಇದಕ್ಕೆ ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ತಾಲ್ಲೂಕು ಅಧ್ಯಕ್ಷ ಬೆಳಗುಂಬ ವೆಂಕಟೇಶ್, ಜೆಡಿಎಸ್ ಯುವ ಮುಖಂಡ ನರಸಾಪುರ ಹರೀಶ್ ಸೇರಿದಂತೆ ಸ್ಥಳೀಯರು ದೇವಸ್ಥಾನದ ಮುಂದೆ ಪ್ರತಿಭಟಿಸಿ ಆರ್‌ಎಫ್‌ಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮುಖಂಡ ಬೆಳಗುಂಬ ವೆಂಕಟೇಶ್ ಮಾತನಾಡಿ, ದಟ್ಟ ಅರಣ್ಯ ಪ್ರದೇಶದಲ್ಲಿ ರೆಸಾರ್ಟ್ ಮಾಡಲು ಅನುಮತಿ ಕೊಟ್ಟು ದಾರಿಯನ್ನು ಬಿಟ್ಟಿದ್ದಾರೆ, ಅಲ್ಲದೆ ಕ್ರಷರ್‌ಗಳ ಅಟ್ಟಹಾಸ ಇದ್ದರು ಕೈಕಟ್ಟಿ ಕುಳಿತಿದ್ದೀರಾ, ಹಿಂದೂ ದೇವಸ್ಥಾನ ಜೀರ್ಣೋದ್ಧಾರ ಮಾಡಲು ಬಂದರೆ ಕಾನೂನು ಅಂತ ಹೇಳಿ ಅಡ್ಡಿಪಡಿಸಿ ನಮ್ಮ ಭಾವನೆಗೆ ದಕ್ಕೆ ತರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದ್ದಾರೆ.
ದೇವಸ್ಥಾನ ಅಭಿವೃದ್ಧಿ ಮಾಡುವುದು ಭಕ್ತರ ಉದ್ದೇಶವಾಗಿದೆ, ನಾವೇನು ಕಾಡು ನಾಶ ಮಾಡುತ್ತಿಲ್ಲ, ಅಕ್ರಮವಾಗಿ ರೆಸಾರ್ಟ್ ಕಟ್ಟುತ್ತಿಲ್ಲ, ಪುರಾತನ ದೇವಾಲಯ ಜೀರ್ಣೋ ದ್ಧಾರ ಕಾರ್ಯ ಮಾಡಲು  ಅಡ್ಡಿಪಡಿಸಿರುವ ಆರ್‌ಎಫ್‌ಒ ಪವಿತ್ರ ಅವರು ತಮ್ಮ ವರ್ತನೆ ಸರಿಪಡಿಸಿಕೊಳ್ಳಬೇಕು, ನಾನು ಯಾವುದೇ ಕಾನೂನು ಉಲ್ಲಂಘಿಸಿ ದೇವಸ್ಥಾನ ಜೀರ್ಣೋದ್ಧಾರ ಮಾಡುತ್ತಿಲ್ಲ, ಕಾಮ ಗಾರಿ ಮುಂದುವರೆಸಲು ಅವಕಾಶ ನೀಡಬೇಕು, ಇಲ್ಲವಾದಲ್ಲಿ ದೇವಸ್ಥಾನದ ಮುಂಭಾಗ ರಸ್ತೆ ತಡೆದು ಹೋರಾಟ ಮಾಡಲಾಗುವುದು ಎಂದು ಬೆಳಗುಂಬ ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.
ಮುಖಂಡರಾದ ಬಸವರಾಜ್, ಕುಮಾರಸ್ವಾಮಿ, ಸುಬ್ಬು, ಜಯಣ್ಣ, ಭರತ್, ನಾಗರಾಜು, ಕುಂದೂರ್ ಪ್ರಸಾದ್, ಪಾಪಯ್ಯ, ಚೌಡಪ್ಪ, ಆದಿಜಾಂಬವ ಶಕ್ತಿ ಸೇನೆಯ ರಾಜಣ್ಣ, ಹರಳೂರು ಪ್ರಕಾಶ್ ಹಾಗೂ ಸ್ಥಳೀಯರು ಹಾಜರಿದ್ದರು.