ಇತ್ತೀಚೆಗೆ ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ದೇವಾಲಯ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಾಲಯಲ್ಲಿ ಶ್ರೀ ಕೈಲಾಸ ಆಶ್ರಮ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿಗಳ 64ನೇ ಜಯಂತಿ ಮಹೋತ್ಸವ ಹಲವಾರು ಸಾಂಸ್ಕೃತಿಕ ಆಚರಣೆಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಶ್ರೀಗಳ ಕೃಪಾಶೀರ್ವಾದ ಮಾರ್ಗದರ್ಶನದಲ್ಲಿ ತಯಾರಾಗುತ್ತಿರುವ ದೇವಿ ಶ್ರೀ ರಾಜರಾಜೇಶ್ವರಿಯನ್ನು ಸ್ತುತಿಸುವ “ಜ್ಞಾನಾಕ್ಷಿ ರಾಜರಾಜೇ ಶ್ವರಿ”ಎಂಬ ಬಹುಭಾಷಾ ಮ್ಯೂಸಿಕಲ್ ವಿಡಿಯೋ ಆಲ್ಬಮ್ ಶೀರ್ಷಿಕೆಗಳನ್ನು ಜಗದ್ಗುರು ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮಿಗಳು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಆರು ಭಾಷೆಗಳಲ್ಲಿ ಈ ಆಲ್ಬಮ್ ತಯಾರಾಗುತ್ತಿದ್ದು ದೇವಿಯ ಸಾಂಪ್ರದಾಯಿಕ ಸ್ತೋತ್ರಗಳು, ಹೊಸ ಶಾಸ್ತ್ರೀಯ ಕೃತಿಗಳು, ಹಾಡುಗಳು ಮತ್ತು ಭಜನೆಗಳನ್ನು ಒಳಗೊಂಡಿದೆ.
ಈ ಆಲ್ಬಮನ್ನು ಖ್ಯಾತ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಸಂಗೀತ ಸಂಯೋಜನೆ ಮತ್ತು ನಿರ್ದೇಶನ ಮಾಡಿದ್ದು ಖ್ಯಾತ ಬಹು ಭಾಷಾ ಹಿನ್ನೆಲೆ ಗಾಯಕಿ ಡಾ.ಪ್ರಿಯದರ್ಶಿನಿ ಮತ್ತು ಇತರರು ಹಾಡಿದ್ದಾರೆ. ಮಲಯಾಳಂ ಸಾಹಿತ್ಯವನ್ನು ಸಿಜು ತುರವೂರ್, ಸಂಸ್ಕೃತ, ಹಿಂದಿ ಮತ್ತು ಕನ್ನಡ ಸಾಹಿತ್ಯವನ್ನು ಮಹೇಶ್ ಮಹದೇವ್ ಬರೆದಿದ್ದಾರೆ. ದೇವಿಯ ಆರಾಧಕರಾದ ನಾವೆಲ್ಲರೂ ಸೇರಿ ಹೊರತರುತ್ತಿರುವ ಈ ವಿಶೇಷ ಆಲ್ಬಮ್ ನಿರ್ಮಾಣಕ್ಕೆ ನಾನು ಪ್ರೋತ್ಸಾಹ-ಸಹಕಾರ ನೀಡುತ್ತಿರುವುದು ನನಗೆ ಅತ್ಯಂತ ಖುಷಿತಂದಿದೆ ಎಂದು ಖ್ಯಾತ ಉದ್ಯಮಿ ನಾಡೋಜ ಡಾ.ಬಿ.ಎಂ.ಉಮೇಶ್ ಕುಮಾರ್ ತಿಳಿಸಿದರು
ಈ ಕಾರ್ಯಕ್ರಮದ ಇನ್ನೊಂದು ವಿಶೇಷತೆಯೇನೆಂದರೆ ಸಂಗೀತ ಸಂಯೋಜಕ ಮಹೇಶ್ ಮಹದೇವ್ ರವರು ದೇವಿ ಕೃಪೆಯಿಂದ ಸೃಷ್ಟಿಸಿರುವ ಹೊಸ ರಾಗ ಒಂದನ್ನು “ಶ್ರೀ ಜ್ಞಾನಾಕ್ಷಿಜಾ”ಎಂದು ಹೆಸರಿಡುವ ಮೂಲಕ ಶ್ರೀಗಳು ಅನಾವರಣಗೊಳಿಸಿದರು. ಈ ರಾಗವು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ 21ನೇ ಮೇಳಕರ್ತ ರಾಗವಾದ ಕೀರವಾಣಿಯ ಜನ್ಯರಾಗವಾಗಿದೆ. ದೇವಿ ಜ್ಞಾನಾಕ್ಷಿ ರಾಜರಾಜೇಶ್ವರಿ ಮೂರ್ತಿಯಿಂದ ಉತ್ಪನ್ನ ವಾಗಿರುವ ಈ ಹೊಸ ರಾಗ, ಅದರಿಂದ ರಚಿಸಲ್ಪಡುವ ಗೀತೆಗಳು ಹಾಗೂ ಈ ವಿಶೇಷದ ಆಲ್ಬಮ್ ಕೇಳುಗರೆಲ್ಲರಿಗೂ ಭಗವತಿ ಅನುಗ್ರಹಿಸಿ ಮಂಗಳವನ್ನುಂಟುಮಾಡಲಿ ಎಂದು ಜಗದ್ಗುರು ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿಯವರು ಆಶೀರ್ವದಿಸಿದರು.
ಸುಮಾರು ಎರಡು ದಶಕಕ್ಕೂ ಹೆಚ್ಚು ಕಾಲದಿಂದಲೂ ನಾನು ಈ ದೇವಸ್ಥಾನಕ್ಕೆ ಭಕ್ತನಾಗಿದ್ದು ನನ್ನ ಜೀವನದಲ್ಲಿ ದೇವಿಯ ಸಾಕಷ್ಟು ಪವಾಡಗಳು ನಡೆದಿವೆ. ಈಗ ದೇವಿಯನ್ನು ಸ್ತುತಿಸುವ ಗೀತೆಗಳನ್ನು ರಚಿಸಲು ಹಾಗೂ ಅವಳ ಮೇಲೆ ಹೊಸ ರಾಗವನ್ನು ಸೃಷ್ಟಿಸಿರುವಂತಹ ಸಮಯ ಬಂದಿರುವುದು ನನ್ನ ಜೀವನದ ಮಹಾ ಭಾಗ್ಯ ಎಂದು ಮಹೇಶ್ ಮಹದೇವ್ ಸಂತೋಷ ಹಂಚಿಕೊಂಡರು.
ಗಾಯಕಿ ಡಾ.ಪ್ರಿಯದರ್ಶಿನಿ ಮಾತನಾಡಿ, ‘ಈ ಹಿಂದೆ ನವರಾತ್ರಿಯ ಸಂದರ್ಭದಲ್ಲಿ ಈ ಪುಣ್ಯಕ್ಷೇತ್ರದಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟಿದ್ದು, ಇಂದು ಆಲ್ಬಂನಲ್ಲಿ ಹಾಡುಗಳನ್ನು ಹಾಡಲು ದೇವಿಯೇ ಆಯ್ಕೆ ಮಾಡಿರುವುದು ನನ್ನ ಪುಣ್ಯ ಎಂದು ಭಾವಿಸುತ್ತೇನೆ ಎಂದರು. ಶಿವಶಕ್ತಿ ಗ್ರೂಪ್‌ನ ಶಿವಶಕ್ತಿ ಡಿಜಿಟಲ್ ಮೀಡಿಯಾ ಪ್ರೊಡಕ್ಷನ್ಸ್ ವೀಡಿಯೋ ತಯಾರಿಸುತ್ತಿದ್ದು, ಆಲ್ಬಂ ಶೀಘ್ರದಲ್ಲೇ ಪಿ.ಎಂ ಆಡಿಯೋಸ್ ಮತ್ತು ಎಂಟರ್ ಟೈನ್ ಮೆಂಟ್ಸ್ ಮೂಲಕ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.