Wednesday, 11th December 2024

ಭಾರತ್ ಜೋಡೊಯಾತ್ರೆ: ಸಂಭ್ರಮಾಚರಣೆ 

ತುಮಕೂರು: ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಅವರು ನ್ಯಾಯಕ್ಕಾಗಿ ಒತ್ತಾಯಿಸಿ ಹಮ್ಮಿಕೊಂಡಿರುವ ಭಾರತ್ ಜೋಡೊ ನ್ಯಾಯಯಾತ್ರೆ  ಆರಂಭಗೊಂಡ ಹಿನ್ನೆಲೆಯಲ್ಲಿ  ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಿ, ಸಿಹಿ ಹಂಚಿ ಯಾತ್ರೆಗೆ ಶುಭ ಕೋರಲಾಯಿತು.
ಈ ವೇಳೆ  ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಷಪಿಅಹಮದ್, ನಮ್ಮ ನಾಯಕರಾಗಿರುವ ರಾಹುಲ್‌ಗಾಂಧಿ ಅವರು ಯಾವುದೇ ರಾಜಕೀಯ ಉದ್ದೇಶವಿಲ್ಲದೆ, ಈ ದೇಶದಲ್ಲಿರುವ ಎಲ್ಲ ಜನರಿಗೆ ನ್ಯಾಯ ಸಿಗಬೇಕು, ಜನತೆ ಸುಖಃ ಶಾಂತಿಯಿಂದ ಬದುಕಬೇಕೆಂಬ ಮಹದಾಸೆಯಿಂದ ಎರಡನೇ ಭಾರತ ಜೋಡೋ ಯಾತ್ರೆಯನ್ನು ಕೈಗೊಂಡಿರುವುದು ಹರ್ಷದಾಯಕ ಎಂದು ಶುಭ ಹಾರೈಸಿದರು.
ನಗರಪಾಲಿಕೆ ಮಾಜಿ ಮೇಯರ್ ಅಸ್ಲಾಂಪಾಷ ಮಾತನಾಡಿ,ಬಿಜೆಪಿ ಒಂದು ಸುಳ್ಳಿನಪಕ್ಷ. ಸುಳ್ಳನ್ನೇ ಸತ್ಯವೆಂದು ನಂಬಿಸಲು ಹೊರಟಿದೆ. ಶ್ರೀರಾಮ ನಮ್ಮೆಲ್ಲರ ಎದೆಯಲ್ಲೂ ಇದ್ದಾನೆ. ಈಗಾಗಲೇ ಕೋಟ್ಯಾಂತರ ರಾಮಮಂದಿರಗಳ ನಮ್ಮಲ್ಲಿವೆ. ಆದರೂ ಸಹ 2024ರ ಲೋಕಸಭಾ ಚುನಾವಣೆ ಗೆಲುವಿಗೆ ಪೂರ್ಣಗೊಳ್ಳದೆ ದೇವಾಲಯದ ಉದ್ಘಾಟನೆಗೆ ಇಡೀ ಆಡಳಿತವಲಯವನ್ನು ಬಳಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ  ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ, ನಮ್ಮ ನಾಯಕರಾದ ರಾಹುಲ್‌ಗಾಂಧಿ ಅವರು ಹಮ್ಮಿಕೊಂಡಿರುವ ಭಾರತ್ ಜೋಡೋ ನ್ಯಾಯಯಾತ್ರೆಯನ್ನು ತಡೆಯುವ ಹಲವಾರು ಷಡ್ಯಂತ್ರಗಳನ್ನು ಬಿಜೆಪಿ ರೂಪಿಸಿತ್ತು.ಆದರೆ ಅವುಗಳೆಲ್ಲವನ್ನು ಮೀರಿ  ನ್ಯಾಯಯಾತ್ರೆ ಆರಂಭಗೊಂಡಿದೆ. ಕರ್ನಾಟಕದ ಮೂಲಕ ಹಾದು ಹೋದ ಭಾರತ ಜೋಡೋ ಯಾತ್ರೆ ಯಶಸ್ವಿಯಾದಂತೆ,ಮಣಿಪುರದಿಂದ ಬಾಂಬೆ ವರಗೆ ನಡೆಯುವ ಭಾರತ್ ಜೋಡೋ ನ್ಯಾಯಯಾತ್ರೆ ಸಹ ನಿಶ್ಚಿತ ಗುರಿಯನ್ನು ತಲುಪಲಿದೆ ಎಂಬ ವಿಶ್ವಾಸವಿದೆ ಎಂದರು.
 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ಈ ದೇಶದ ಜನಸಾಮಾನ್ಯರ ಅಭ್ಯುದಯಕ್ಕಾಗಿ ಹಮ್ಮಿಕೊಂಡಿರುವ ಭಾರತ್ ಜೋಡೋ ನ್ಯಾಯಯಾತ್ರೆ ಸುಮಾರು 6700 ಕಿ.ಮಿ. ಚಲಿಸಲಿದ್ದು,ಅದರ ಯಶಸ್ವಿಗಾಗಿ ಇಂದು ನಾವೆಲ್ಲರೂ ಶುಭ ಹಾರೈಸುವ ಸಲುವಾಗಿ ಸೇರಿದ್ದೇವೆ.ಕಳೆದ 10 ವರ್ಷಗಳಲ್ಲಿ ಮೋದಿ ಆಡಳಿತ ತೆರಿಗೆಯಿಂದ ನೊಂದು, ಬೆಂದಿರುವ ಬಡ ಜೀವಿಗಳಿಗೆ ಆಸರೆಯಾಗಲಿದೆ.ಜಿ.ಎಸ್.ಟಿ, ಇನ್ನಿತರ ಪರೋಕ್ಷ ತೆರಿಗೆಗಳ ಮೂಲಕ ಹಗಲು ದರೋಡೆ ನಡೆಸುತ್ತಿರುವ ಬಿಜೆಪಿಗೆ ಭಾರತ್ ಜೋಡೋ ನ್ಯಾಯ ಯಾತ್ರೆ ನಡುಕ ಹುಟ್ಟಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಮಹೇಶ್,ಮುಖಂಡರಾದ ಪಂಚಾಕ್ಷರಯ್ಯ, ಶ್ರೀನಿವಾಸ್, ಸಿಮೆಂಟ್ ಮಂಜಣ್ಣ, ಅಸ್ಲಾಂಪಾಷ, ಶಿವಾಜಿ, ಆತೀಕ ಅಹಮದ್, ನಾಗರಾಜು, ನರಸಿಂಹಯ್ಯ, ಬಿ.ಜಿ.ಲಿಂಗರಾಜು, ವಾಲೆಚಂದ್ರು, ಕೆಂಪಣ್ಣ, ಎಂ.ವಿ.ರಾಘವೇಂದ್ರಸ್ವಾಮಿ, ದಿನೇಶ್, ಷಣ್ಮುಖಪ್ಪ, ನಟರಾಜಶೆಟ್ಟಿ, ಶೆಟ್ಟಾಳಯ್ಯ, ಮರಿಚನ್ನಮ್ಮ, ಸುಜಾತ, ಆದಿಲ್ ಪಾಲ್ಗೊಂಡಿದ್ದರು.