ತುಮಕೂರು: ಪೊಲೀಸ್ ಠಾಣೆಗಳಿಗೆ ತಮ್ಮ ಸಮಸ್ಯೆ ಹೊತ್ತು ಬರುವ ಜನರೊಂದಿಗೆ ಪೊಲೀಸರು ತಾಳ್ಮೆಯಿಂದ ವರ್ತಿಸಿ ಅವರ ಅಹವಾಲು ಆಲಿಸ ಬೇಕು ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗೀತಾ ಕೆ.ಜಿ., ಕಿವಿಮಾತು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರ ಸ್ಮಾರಕದ ಪುತ್ಥಳಿಗೆ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿ ಮಾತನಾಡಿದರು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಪೊಲೀಸ್ ಅಧಿಕಾರಿಗಳು ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಾ, ತಮ್ಮ ಬಳಿ ಸಾರ್ವಜನಿಕರು ಅಹವಾಲು ಹೇಳಿಕೊಳ್ಳಲು ಬಂದಾಗ ತಾಳ್ಮೆಯಿಂದ ಅವರು ಹೇಳುವುದನ್ನು ಆಲಿಸಬೇಕು. ನಂತರ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.
ಆರಕ್ಷಕರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹಲವು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುತ್ತೀರಾ, ಆದರೆ ಕೆಲವು ತನಿಖೆಗಳು ಕಾನೂನಿನ ಚೌಕಟ್ಟಿ ನಲ್ಲಿರುವುದಿಲ್ಲ. ಆದರೂ ಸುಮ್ಮನೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುತ್ತೀರಾ. ಆದರೆ ಇದರಿಂದ ಏನು ಪ್ರಯೋಜನವಾಗುವುದಿಲ್ಲ. ಹಾಗಾಗಿ ತನಿಖೆ ಕಾನೂನಿನ ಚೌಕಟ್ಟಿನಲ್ಲಿ ಇರಬೇಕು ಎಂದರು.
ಈ ವರ್ಷ ದೇಶದಲ್ಲಿ ಒಟ್ಟು 189 ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಈ ಪೈಕಿ ತುಮಕೂರಿನ ಒಬ್ಬರು ಸೇರಿ ಕರ್ನಾಟಕದಲ್ಲಿ 16 ಜನ ಪೊಲೀಸರು ಹುತಾತ್ಮರಾಗಿದ್ದಾರೆ. ನಮ್ಮ ರಾಜ್ಯ ಮತ್ತು ದೇಶದಲ್ಲಿ ಪೊಲೀಸರು ಹುತಾತ್ಮರಾಗಿರುವುದು ವಿಷಾದಕರ ಸಂಗತಿ ಎಂದರು.
ಪ್ರತಿನಿತ್ಯ ನಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಸುಗಮವಾಗಿ ನಡೆಯಲು ವೀರ ಪೊಲೀಸ್ ಅಧಿಕಾರಿಗಳು ಕಾರಣ. ಕರ್ನಾಟಕ ಪೊಲೀಸರಿಗೆ ದೇಶದಲ್ಲೇ ಅತ್ಯುತ್ತಮವಾದ ಹೆಸರಿದೆ. ಇದು ಹೆಮ್ಮೆಯ ಸಂಗತಿ ಎಂದರು. ನಮ್ಮ ದೇಶದಲ್ಲಿ ಉಗ್ರರ ಚಟುವಟಿಕೆಗಳಿಗೆ ಅನುವು ಮಾಡಿಕೊಡುತ್ತಿದ್ದೇವೆ. ಪ್ರತಿ ಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ಅರಿತು ಜಗತ್ತಿನಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಗಮನ ಹರಿಸಿ ಕಡಿವಾಣ ಹಾಕಲು ಯತ್ನಿಸಿ ದಾಗ ಮಾತ್ರ ನಮ್ಮ ದೇಶ ರಾಮರಾಜ್ಯವಾಗುತ್ತದೆ. ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಪ್ರತಿ ವರ್ಷದಂತೆ ಈ ವರ್ಷವೂ ಪೊಲೀಸ್ ಹುತಾತ್ಮರ ದಿನಾಚರಣೆ ಯನ್ನು ಆಚರಿಸುತ್ತಿದ್ದೇವೆ. ನಮ್ಮ ದೇಶದ ಉತ್ತರದ ಗಡಿ ಭಾಗವು ವರ್ಷವಿಡೀ ಹಿಮದಿಂದ ಆವೃತವಾಗಿರುವ ದುರ್ಗಮ ಪ್ರದೇಶವಾಗಿದೆ. ಇಂತಹ ಸಂದರ್ಭದಲ್ಲಿ 1951 ರ ಅ. 21 ರಂದು ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಕರಣ್‌ಸಿಂಗ್ ಎಂಬ ಡಿವೈಎಸ್ಪಿ ರವರ ನಾಯಕತ್ವದಲ್ಲಿ ಸಿಆರ್‌ಪಿ ತಂಡದವರು ನಮ್ಮ ದೇಶದ ಗಡಿ ಭಾಗದ ಲಡಾಕ್ ಎಂಬಲ್ಲಿ ಕಾವಲು ಕಾಯುತ್ತಿರುವಾಗ ಚೀನಾ ದೇಶದ ಅಸಂಖ್ಯಾತ ಸೈನಿಕರು ನಮ್ಮ ದೇಶದ ಗಡಿ ಭಾಗದಲ್ಲಿ ಒಳನುಗ್ಗಿದರು. ಅಲ್ಲಿದ್ದ ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ಕೊನೆಯ ಹನಿ ರಕ್ತ ಇರುವವರೆಗೂ ಅಪ್ರತಿಮವಾಗಿ ಹೋರಾಡಿ ವೀರ ಮರಣ ಹೊಂದಿದರು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುವಾಗ ಪ್ರಾಣ ತೆತ್ತಿರುವ 189 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರ ಹೆಸರು ಅವರು ಪಠಿಸಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಎಸ್ಪಿ ಮರಿಯಪ್ಪ, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಡಿವೈಎಸ್ಪಿ ಚಂದ್ರಶೇಖರ್. ಕೆಎಸ್‌ಆರ್‌ಪಿ ಡೆಪ್ಯೂಟಿ ಕಮಾಂಡೆಂಟ್ ಸೂರ್ಯನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.