Saturday, 14th December 2024

K B jayanna: ಶಿಕ್ಷಕರನ್ನು ಗೌರವಿಸುವುದು ಸಂತೃಪ್ತಿಯ ಕ್ಷಣ- ಕೆ.ಬಿ.ಜಯಣ್ಣ


ನಮ್ಮ ಸಂಸ್ಥೆಯಲ್ಲಿ ತುಮಕೂರು(Tumkur) ಜಿಲ್ಲೆಯ ಅತ್ಯುತ್ತಮ ಶಿಕ್ಷಕರನ್ನು ಗೌರವಿಸಿದ ಈ ಕ್ಷಣ ಅತ್ಯಂತ ಸಂತೃಪ್ತಿಯದ್ದು ಏಕೆಂದರೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾರ್ಗದರ್ಶನ ನೀಡುತ್ತಾ ಜ್ಞಾನದ ಕಿಡಿಯನ್ನು ಮಕ್ಕಳ ಮನದಲ್ಲಿ ಹಚ್ಚಿಸಿ ಅವರ ಬದುಕನ್ನು ಬೆಳಗುವ ಶಿಕ್ಷಕರು ನಿಜಾರ್ಥದಲ್ಲಿ ಬದುಕನ್ನು ರೂಪಿಸುವವರು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಕೆ.ಬಿ.ಜಯಣ್ಣ(K B Jayanna) ಹೇಳಿದರು.

ಅವರು ತುಮಕೂರು ರೌಂಡ್ ಟೇಬಲ್- 173 ವತಿಯಿಂದ ವಿದ್ಯಾನಿಧಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗುರುದೇವೋಭವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

ಇದೇ ಸಂದರ್ಭದಲ್ಲಿ ಶಿಕ್ಷಕರನ್ನು ಗೌರವಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಶಿಕ್ಷಕರಾಗುವುದೆಂದರೆ ಇತರ ಎಲ್ಲ ಉದ್ಯೋಗಗಳನ್ನು ಸೃಷ್ಟಿಸುವ ಅತ್ಯಂತ ಗೌರವಾನ್ವಿತ ಉದ್ಯೋಗ. ಬೋಧನೆ ಯಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಕ್ಷೇತ್ರದಲ್ಲಿ ಸದಾ ಹೊಸತನವನ್ನು ಕಂಡುಕೊಳ್ಳುತ್ತಿರಬೇಕು. ತಂತ್ರ ಜ್ಞಾನದ ಬಳಕೆಯನ್ನು ಸಮರ್ಪಕವಾಗಿ ತಿಳಿದವರು ವಿದ್ಯಾರ್ಥಿಗಳನ್ನು ಹೆಚ್ಚು ಪ್ರಭಾವಿಸಬಲ್ಲರು. ವಿದ್ಯಾರ್ಥಿಗಳ ಅಭಿಮಾನವು ಶಿಕ್ಷಕರರಿಗೆ ಸದಾ ಸ್ಫೂರ್ತಿದಾಯಕವಾದದ್ದು. ಗೌರವ, ಆದರ, ಮನ್ನಣೆಗಳಿಗೆ ಪಾತ್ರರಾಗುವ ಶಿಕ್ಷಕರು ಸಂಸ್ಥೆಯನ್ನು ಉನ್ನತ ಸ್ತರಗಳಿಗೆ ಏರಿಸಬಲ್ಲರು. ಒಂದು ಸಂಸ್ಥೆಯನ್ನು ಸಮಾಜವು ಅಳೆಯುವುದು ಅಲ್ಲಿರುವ ಉತ್ತಮ ಶಿಕ್ಷಕರಿಂದ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ರೌಂಡ್ ಟೇಬಲ್ – 173 ಕಾರ್ಯದರ್ಶಿ ಆಕಾಶ್, ಶಿಕ್ಷಣದ ಮೂಲಕ ಸ್ವಾತಂತ್ರö್ಯ ಎಂಬ ಧ್ಯೇಯವಾಕ್ಯದೊಂದಿಗೆ ರೌಂಡ್ ಟೇಬಲ್ ದೇಶಾದ್ಯಂತ ಕೆಲಸ ಮಾಡುತ್ತಿದೆ. ಸರಕಾರಿ ಶಾಲೆಗಳಿಗೆ ಅಗತ್ಯವಿರುವ ತರಗತಿ ಕೊಠಡಿಗಳನ್ನು ಕಟ್ಟಿಸಿಕೊಡುವುದರ ಜತೆಗೆ ಮಕ್ಕಳಿಗೆ ಅಗತ್ಯವಿರುವ ಇತರ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ರೌಂಡ್ ಟೇಬಲ್ ಸಮಾನ ಮನಸ್ಕರು ಶ್ರಮಿಸುತ್ತಿದ್ದಾರೆ. ಶಿಕ್ಷಕರನ್ನು ಗೌರವಿಸುವುದು ಅವರ ಸೇವೆಗೆ ಪ್ರತಿಯಾಗಿ ನಾವು ತೋರಬಹುದಾದ ಸಣ್ಣಕಾಣ ಕೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗೋಪಾಲರಾಜು ಕೆ.ಎನ್., ಸಿ.ಜಿ. ವೆಂಕಟೇಶ್ವರ, ಕೆ.ಸಿ. ಪುಷ್ಪಲತಾ, ಸುರೇಂದ್ರಕುಮಾರ್ ಡಿ.ಬಿ., ಕುಸುಮಾ ಟಿ.ಸಿ., ಮಂಜುನಾಥ್ ಪಿ., ರವಿ ಡಿ.ಎಸ್., ಶಾರದಮ್ಮ ಬಿ.ಎಸ್., ಶೀಲಾ ಡಿ., ಸುಮಾ ಎ., ನಂದನಾ ವಿ., ಯಶವಂತ್ ಕೆ.ಎಚ್., ಮತ್ತು ಮಧುಮಿತಾ ಅವರನ್ನು ಈ ಸಂದರ್ಭದಲ್ಲಿ ಗೌರವಿಸ ಲಾಯಿತು.

ರೌಂಡ್ ಟೇಬಲ್ 173 ಅಧ್ಯಕ್ಷ ಕಿರಣ್ ಹಾಗೂ ವಿದ್ಯಾನಿಧಿ ಪ್ರಾಂಶುಪಾಲರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ರುಚಿತಾಶ್ರೀ ಮತ್ತು ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕಿ ಸೋನಿಯಾ ಸ್ಮಿತಾ ಸ್ವಾಗತಿಸಿ, ಪೂರ್ಣಗಂಗಾ ವಂದಿಸಿದರು. ಸನ್ಮಾನಿತರ ಪರಿಚಯವನ್ನು ರಾಜೀವ್ ಕೆ.ಆರ್., ವಿನಯ್, ಮಾನಸಾ ಹಾಗೂ ದಿವ್ಯ ಜ್ಯೋತಿ ಪ್ರಸ್ತುತ ಪಡಿಸಿದರು. ಹೇಮಲತಾ ಎಂ.ಎಸ್. ಕಾರ್ಯಕ್ರಮ ನಿರ್ವಹಿಸಿದರು.