Friday, 13th December 2024

ಪತ್ರಿಕಾ ವಿತರಕರು ಸಂಘಟಿತರಾದಾಗ ಯಶಸ್ಸು ಸಾಧ್ಯ: ಕೆ.ಶಂಭುಲಿಂಗ

ತುಮಕೂರು : ಪತ್ರಿಕಾ ವಿತರಕರು ಸಂಘಟಿತ ರಾದಾಗ ಮಾತ್ರ ಯಶಸ್ಸು ಸಾಧ್ಯ.  ಸರ್ಕಾರ ಪತ್ರಿಕಾ ವಿತರಕರು ಮತ್ತು ಪತ್ರಕರ್ತ ರಿಗೆ ಬಜೆಟ್ ನಲ್ಲಿ ಹಣ ಮೀಸಲಿಟ್ಟು, ಮಾಧ್ಯಮ ಅಕಾಡೆಮಿ ಮೂಲಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಕರೆ ನೀಡಿದರು.
ನಗರದ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಸಭಾಂಗಣದಲ್ಲಿ ಲೋಕ ಕಲ್ಯಾಣ ಸೇವಾ ಟ್ರಸ್ಟ್, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ತುಮಕೂರು ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘದ ಸಹಯೋಗದಲ್ಲಿ ಬುಧವಾರ ನಡೆದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಪತ್ರಿಕಾ ವಿತರಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾ ವಿತರಕರು ಮತ್ತು ಪತ್ರಕರ್ತರ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ತರ ಲಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬರು ಒಗ್ಗಟ್ಟಾದಾಗ ಮಾತ್ರ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ನಾನೂ ವಿದ್ಯಾರ್ಥಿ ದೆಸೆಯಲ್ಲಿ ಪತ್ರಿಕಾ ವಿತರಕನಾಗಿದ್ದೆ. ಹಾಗಾಗಿ ಅವರ ಸಮಸ್ಯೆ ಗಳ ಬಗ್ಗೆ ಅರಿವಿದೆ.
ಕಾರ್ಮಿಕ ಇಲಾಖೆಯಿಂದ ಪತ್ರಿಕಾ ವಿತರಕರಿಗೆ ದೊರೆಯುವ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಿರಂತರ ಪ್ರಯತ್ನದಲ್ಲಿದ್ದೇವೆ. ಪತ್ರಿಕಾ ವಿತರಕರು ಪತ್ರಿಕೆಯ ಅವಿಭಾಜ್ಯ ಅಂಗ. ಧೀರ್ಘ ಇತಿಹಾಸ ಹೊಂದಿರುವ ಶ್ರೇಷ್ಠ ವೃತ್ತಿಯಿದು. ಸ್ವಾಭಿಮಾನದ ಬದುಕಿಗೆ ವಿತರಕರ ವೃತ್ತಿ ನೆರವಾಗಿದೆ. ಈ ಮೂಲಕವೇ ಸಾಕಷ್ಟು ಮಂದಿ ಸಾಧನೆಯ ಅತ್ಯುನ್ನತ ಹುದ್ದೆಯನ್ನು ಏರಿರುವುದನ್ನು ಸ್ಮರಿಸಬಹುದು. ನಾವು ಯಾವಾಗಲೂ ಪತ್ರಿಕಾ ವಿತರಕರ ಬೆಂಬಲಕ್ಕಿರುತ್ತೇವೆ ಎಂದರು.
 ರಾಜ್ಯ ಪತ್ರಿಕಾ ರಂಗಕ್ಕೆ 183 ವರ್ಷದ ಇತಿಹಾಸವಿದೆ. ವಿತರಕರಿಗೆ ಯಾವುದೇ ರೀತಿಯ ಸೌಲಭ್ಯ ದೊರೆಯುತ್ತಿಲ್ಲ. ನಮ್ಮಲ್ಲಿ ಸಂಘಟನೆಯ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾ ವಿತರಕರ ಸಂಘ ಕಟ್ಟಿಕೊಂಡು ಸೌಲಭ್ಯಕ್ಕಾಗಿ ಹೋರಾಟ ಮಾಡು ತ್ತಿದ್ದೇವೆ. ಪತ್ರಿಕಾ ವಿತರಕರು ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಜನರು ಏಳುವ ಮೊದಲೇ ಮನೆಗೆ ಪತ್ರಿಕೆ ಹಾಕಿ ಸುದ್ದಿ ಮುಟ್ಟಿಸು ತ್ತೇವೆ. ನಮ್ಮನ್ನು ಸರ್ಕಾರ ಕಡೆಗಣಿಸಿದ್ದು, ಪ್ರಸ್ತುತದಲ್ಲಿ ವಿತರಕರ ಸಂಘಟಿತ ಹೋರಾಟ ಅಗತ್ಯವಿದೆ ಎಂದರು.
ಪ್ರಗತಿಪರ ರೈತ ಸಿ.ಕೆ.ಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗಗಳಿಗೆ ಪತ್ರಿಕೆ ತಲುಪಿಸುವಲ್ಲಿ ಪತ್ರಿಕಾ ವಿತರಕನ ಪಾತ್ರ ದೊಡ್ಡದು. ಗಾಳಿ, ಮಳೆಯಲ್ಲೂ ಜಗ್ಗದೆ ತನ್ನ ನಿತ್ಯ ಕಾಯಕವನ್ನು ನಿಷ್ಠೆಯಿಂದ ಮಾಡುವ ವಿತರಕನನ್ನು  ಪತ್ರಕರ್ತನಷ್ಟೇ ವಿತರಕನಿಗೂ ಸಮಾಜದಲ್ಲಿ ಆದ್ಯತೆ ಸಿಗುವಂತಾಗಲಿ. ಲೋಕ ಕಲ್ಯಾಣ ಸೇವಾ ಟ್ರಸ್ಟ್ ನವರು ಪತ್ರಿಕಾ ವಿತರಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಆದರ್ಶ ಪ್ರಾಯವಾಗಿದೆ ಎಂದರು.
ಲೋಕ ಕಲ್ಯಾಣ ಸೇವಾ ಟ್ರಸ್ಟಿನ ಅಧ್ಯಕ್ಷೆ ಕವಿತಾ ಕಮ್ಮನಕೋಟೆ ಮಾತನಾಡಿ, ನಾವೆಲ್ಲರೂ ಪತ್ರಿಕೋದ್ಯಮದ ಸಂಬಂಧಿ ಗಳಾಗಿದ್ದೇವೆ. ಪತ್ರಿಕೋದ್ಯಮ ಬದಲಾವಣೆಯ ಕಾಲಘಟ್ಟದಲ್ಲಿದೆ. ಪತ್ರಿಕೆ ಎಲ್ಲರ ಕೈ ಸೇರುತ್ತಿರುವುದರ ಹಿಂದೆ ವಿತರಕರ ಪಾತ್ರ ಮಹತ್ವದ್ದು. ಇಂದು ಪತ್ರಿಕೋದ್ಯಮ ಅಸ್ತಿತ್ವ ಉಳಿಸಿಕೊಂಡಿದೆ ಎನ್ನುವುದಾದರೆ ಅದು ವಿತರಕರ ಪರಿಶ್ರಮದಿಂದ ಮಾತ್ರ. ವಿತರಕರ ಬದುಕು ಸುಸ್ಥಿರವಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಬೇಕು ಎಂದರು.
ಲೋಕ ಕಲ್ಯಾಣ ಸೇವಾ ಟ್ರಸ್ಟ್ ಎಲ್ಲರ ಏಳ್ಗೆಗಾಗಿ ಸೃಷ್ಟಿಯಾಗಿದ್ದು, ರೈತರು, ಪರಿಸರ ಕಾಳಜಿ, ಸಾಮಾಜಿಕ ನ್ಯಾಯ, ಉದ್ಯೋಗ ಸೃಷ್ಟಿಯ ಪೂರಕವಾಗಿ ಕೆಲಸ ಮಾಡಲಿದೆ. ಎಲ್ಲರೂ ಪರಸ್ಪರ ಸಹಕಾರ, ಸೌಹಾರ್ದ ಸಂಬಂಧ ಕಟ್ಟಿಕೊಳ್ಳೋಣ ಎಂದು ತಿಳಿಸಿ ದರು. ಈ ವೇಳೆ ಜಿಲ್ಲೆಯಾದ್ಯಂತ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಪತ್ರಿಕಾ ವಿತರಕರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುರುಷೋತ್ತಮ್, ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘದ ಅಧ್ಯಕ್ಷ ಚಲುವರಾಜು, ಕಾರ್ಯದರ್ಶಿ ವಾಸುದೇವ ಎನ್. ನಾದೂರು, ಗೌರವಾಧ್ಯಕ್ಷ ನರಸಿಂಹಯ್ಯ ಟಿ.ಎಲ್, ಕೆಯು ಡಬ್ಲ್ಯೂ ಜೆ ನಿರ್ದೇಶಕರಾದ ಎಚ್.ಎಸ್.ಪರಮೇಶ್, ಪ್ರಧಾನ ಕಾರ್ಯದರ್ಶಿ ರಘುರಾಮ್, ಲೋಕ ಕಲ್ಯಾಣ ಸೇವಾ ಟ್ರಸ್ಟ್ ನ ಉಪಾಧ್ಯಕ್ಷ ರವಿಕುಮಾರ್ ಕಮ್ಮನಕೋಟೆ ಸೇರಿದಂತೆ ಮುಂತಾದವರು ಇದ್ದರು.