Monday, 14th October 2024

ದಾಖಲಾತಿಯಲ್ಲಿ ಕಾಡುಗೊಲ್ಲ ನಮೂದಿಸಲು ಮನವಿ

ತುಮಕೂರು: ಜಿಲ್ಲೆಯಲ್ಲಿರುವ ಕಾಡುಗೊಲ್ಲ ಸಮುದಾಯದವರು  ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಸಂದರ್ಭದಲ್ಲಿ ಜಾತಿ ಅಂಕಣದಲ್ಲಿ ಕಾಡುಗೊಲ್ಲ ಎಂದು ದಾಖಲಿಸುವಂತೆ ಜಿಲ್ಲಾ ಕಾಡುಗೊಲ್ಲರ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಶತಶತಮಾನಗಳ ಹಿಂದಿನಿಂದಲೂ ಕಾಡುಗೊಲ್ಲರು ತಮ್ಮ ಅಜ್ಞಾನದಿಂದ ಗೊಲ್ಲರ ಹಟ್ಟಿಗಳಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಸಮುದಾಯದ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ನೈಜ ಜಾತಿಯಾದ “ಕಾಡು ಗೊಲ್ಲ” ಎಂದು ದಾಖಲಿಸುವಲ್ಲಿ ಅಸಮರ್ಥರಾಗಿದ್ದು, ಕ್ರಿ.ಶ.2018ಕ್ಕೂ ಮೊದಲು ಕಾಡುಗೊಲ್ಲ ಬದಲಾಗಿ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಅಡವಿಗೊಲ್ಲ ಸೇರ್ಪಡೆಯಾಗಿತ್ತು. ಆದರೆ ರಾಜ್ಯ ಸರಕಾರ ದಿ.29.01.2018ರಂದು ಪತ್ರ ಸಂಖ್ಯೆ: ಹಿಂ.ವ.ಕ.328 ಬಿ.ಸಿ.ಎ 2017ರಂತೆ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಹಟ್ಟಿಗೊಲ್ಲ ಎಂಬ ಜಾತಿ ಸೂಚಕ ಪದ ಸೇರ್ಪಡೆಗೊಳಿಸಿದೆ.
ಗೊಲ್ಲರಹಟ್ಟಿಗಳಲ್ಲಿ ವಾಸಿಸುವ ಜನರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಕಾಡುಗೊಲ್ಲ ಎಂದು ನಮೂದಿಸಿ ದಾಖಲೆಯಲ್ಲಿ ಸೇರಿಸುವಂತೆ ತುಮಕೂರು ಜಿಲ್ಲಾ ಕಾಡುಗೊಲ್ಲರ ಸಂಘದ ಅಧ್ಯಕ್ಷ ಡಿ.ಕೆ ಗಂಗಾಧರಯ್ಯ, ಗೌರವಾಧ್ಯಕ್ಷ ಎಸ್.ಡಿ ಬಸವರಾಜು,  ಉಪಾಧ್ಯಕ್ಷ ಡಿ.ವಿ ದೊಡ್ಡವೀರಯ್ಯ, ಪ್ರಧಾನ ಕಾರ್ಯದರ್ಶಿ ಭದ್ರೇಗೌಡ ಮತ್ತು ಖಜಾಂಚಿ ರಾಮಯ್ಯ  ಮನವಿ ಮಾಡಿದ್ದಾರೆ.