Saturday, 23rd November 2024

ಕೇಂದ್ರ ಅಧ್ಯಯನ ತಂಡದದಿಂದ ಬೆಳೆ ಹಾನಿ ಪರಿಶೀಲನೆ

ಮೊದಲ ಕಂತಿನಲ್ಲಿ ಜಿಲ್ಲೆಗೆ 30.79 ಕೋಟಿ ರೂ. ಪರಿಹಾರ ಬಿಡುಗಡೆ

ಕಲಬುರಗಿ: ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ‌ ನೇತೃತ್ವದ ಆಂತರಿಕ‌ ಸಚಿವಾಲಯದ ತ್ರಿಸದಸ್ಯ ತಂಡ ಗುರುವಾರ ಜಿಲ್ಲೆಯ ಕಲಬುರಗಿ ತಾಲೂಕಿನ ಹೊನ್ನಕಿರಣಗಿ, ಜೇವರ್ಗಿ ಪಟ್ಟಣಕ್ಕೆ ಭೇಟಿ ನೀಡಿ ಬೆಳೆ ಹಾನಿ, ಮಳೆಯಿಂದ ಬಿದ್ದ ಮನೆಗಳನ್ನು ವೀಕ್ಷಿಸಿ ದರು.

ಕಳೆದ‌ ಜುಲೈ-ಆಗಸ್ಟ್ ಮಾಹೆಯಲ್ಲಿ ಜಿಲ್ಲೆಯಲ್ಲಿ ಸುರಿದ‌ ಮಳೆಯಿಂದ ಹಾಳಾದ‌ ಬೆಳೆ‌ಗಳ ವೀಕ್ಷಣೆಗೆ ತಂಡ ಆಗಮಿಸಿತ್ತು. ತಂಡದಲ್ಲಿ ಕೇಂದ್ರದ ಗ್ರಾಮೀಣಾ ಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್.ಬಿ.ತಿವಾರಿ ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಎಸ್.ಜಗದೀಶ ಜೊತೆಯಲ್ಲಿದ್ದರು.

ಆರಂಭದಲ್ಲಿ ಕಲಬುರಗಿ ತಾಲೂಕಿನ ಹೊನ್ನ‌ಕಿರಣಗಿಗೆ ಭೇಟಿ ನೀಡಿದ ತಂಡ ಗ್ರಾಮದ ರೈತ ಮಹಿಳೆ ರಸೂಲ್ ಬಿ. ಅವರ 1.30 ಎಕರೆ ಪ್ರದೇಶದಲ್ಲಿ ಬೆಳೆಯಲಾದ ತೊಗರಿ ಬೆಳೆ ವೀಕ್ಷಿಸಿದರು. ಸ್ಥಳದಲ್ಲಿದ ಕೃಷಿ ಅಧಿಕಾರಿಗಳಿಂದ ಗ್ರಾಮದಲ್ಲಿ ಬಿತ್ತನೆಯಾದ ಪ್ರದೇಶದಲ್ಲಿ ಹಾನಿಯ ಪ್ರಮಾಣದ‌ ಬಗ್ಗೆ ಮಾಹಿತಿ ಪಡೆದರು.

ಪ್ರಭಾರಿ ಜಂಟಿ ಕೃಷಿ ನಿರ್ದೇಶಕ ಸಮದ‌ ಪಟೇಲ್, ಸಹಾಯಕ ಕೃಷಿ‌ ನಿರ್ದೇಶಕ ಚಂದ್ರಕಾಂತ ಜೀವಣಗಿ ಅವರು ಮಾತನಾಡಿ, ಗ್ರಾಮದಲ್ಲಿ 3,291 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಹತ್ತಿ, ಕಡಲೆ ಬೆಳೆಯಲಾಗಿತ್ತು, ಇದರಲ್ಲಿ 680 ಹೆಕ್ಟೇರ್ ಪ್ರದೇಶ ಹಾಳಾಗಿದೆ. 350 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾದ ಹತ್ತಿಯಲ್ಲಿ 50 ಹೆಕ್ಟೇರ್ ಹಾನಿಯಾಗಿದೆ.

1,481 ರೈತರ‌ ಹೊಲಕ್ಕೆ ನೀರು ಹೊಕ್ಕು ಬೆಳೆ‌ ನಾಶವಾಗಿದೆ. ಇಲ್ಲಿ ರೈತರು ಎರಡ್ಮೂರು ಬಾರಿ ಬಿತ್ತನೆ ಮಾಡಿದ್ದಾರೆ. ಪ್ರತಿ ಬಾರಿ ಬಿತ್ತನೆಗೆ ಪ್ರತಿ ಎಕರೆಗೆ 4-5 ಸಾವಿರ ರೂ. ವ್ಯಯ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ನಂತರ ಇದೇ ಗ್ರಾಮದ ವಿನೋದ ಬಸನಾಳಕರ್ ಅವರ 10 ಎಕರೆ‌ ಪ್ರದೇಶದಲ್ಲಿ ಬೆಳೆದ ಹಾನಿಯಾದ ತೊಗರಿ ಬೆಳೆ ವೀಕ್ಷಿಸ ಲಾಯಿತು. ರೈತ ವಿನೋದ‌ ಬಸನಾಳಕರ್ ಮಾತನಾಡಿ, ಶೇ.80ರಷ್ಟು ಬೆಳೆ ಹಾನಿಯಾಗಿದೆ. ಬೆಳೆ ವಿಮೆ ಪರಿಹಾರಕ್ಕೆ ದೂರು ನೀಡುವ ಕಾಲಾವಧಿಯನ್ನು ವಿಸ್ತರಿಬೇಕು ಎಂದು‌ ಮನವಿ ಮಾಡಿದರು.

ನಂತರ ತಂಡವು ಜೇವರ್ಗಿ ಪಟ್ಟಣದಲ್ಲಿ ಮಳೆಯಿಂದ ಭಾಗಶಃ ಹಾನಿಯಾದ ಮಲ್ಲಿಕಾ ರ್ಜುನ ಡೂಗನಕರ್, ಧರ್ಮಣ್ಣಾ, ಮರೆಮ್ಮ ಗಂಡ ಕಾಳಪ್ಪ ಅವರ ಮನೆ ವೀಕ್ಷಿಸಿತು. ಜೇವರ್ಗಿ ತಾಲೂಕಿನ ಪ್ರಭಾರಿ ತಹಶೀಲ್ದಾರ ಸಂಜೀವಕುಮಾರ ದಾಸರ್ ಅವರು ಜೇವರ್ಗಿ ಪಟ್ಟಣದಲ್ಲಿ 4 ಸೇರಿ ತಾಲೂಕಿನಾದ್ಯಂತ 160 ಮನೆ ಹಾನಿಗೊಳಗಾಗಿವೆ. ಭಾಗಶಃ ಹಾನಿಯಾದ‌ ಮನೆಗಳಿಗೆ ತಕ್ಷಣ 10 ಸಾವಿರ ರೂ. ತದನಂತರ 40 ಸಾವಿರ ರೂ. ಸೇರಿ ಒಟ್ಟು 50 ಸಾವಿರ ರೂ. ಪರಿಹಾರ ನೀಡಲಾಗಿದೆ ಎಂದರು.

ಜಿಲ್ಲೆಗೆ 30.79 ಕೋಟಿ ರೂ. ಪರಿಹಾರ ಬಿಡುಗಡೆ: ಡಿ.ಸಿ. ಯಶವಂತ ವಿ. ಗುರುಕರ್ ಮಾತನಾಡಿ, ಕಳೆದ ಆಗಸ್ಟ್ ಮಾಹೆಯ ಮೊದಲ 10 ದಿನದಲ್ಲಿ ಹೆಚ್ಚಿನ‌ ಮಳೆಯಾದ ಪರಿಣಾಮ ಜಿಲ್ಲೆಯಲ್ಲಿ 1,11,400 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ. 805 ಮನೆಗಳು ಮಳೆಗೆ ತುತ್ತಾಗಿದ್ದು, 6 ಜನರ ಮಾನವ ಹಾನಿ ಪ್ರಕರಣ ವರದಿಯಾಗಿದೆ. ಪ್ರಸ್ತುತ ಬೆಳೆ ಹಾನಿ ಪರಿಹಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಬುಧವಾರ 33,487 ರೈತರಿಗೆ 30.79 ಕೋಟಿ ರೂ. ಮೊದಲನೇ ಕಂತಿನ ರೂಪದಲ್ಲಿ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಜಮೆ‌ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಲಬುರಗಿ ತಹಶೀಲ್ದಾರ ಪ್ರಕಾಶ ಕುದರಿ ಸೇರಿದಂತೆ ಕಂದಾಯ, ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು. ನಂತರ ತಂಡವು ವಿಜಯಪುರ ಜಿಲ್ಲೆಗೆ ಪ್ರಯಾಣಿಸಿತು.

ಇದಕ್ಕೂ ಮುನ್ನ ಕಲಬುರಗಿ ನಗರದ ಐವಾನ-ಎ-ಶಾಹಿ ಅತಿಥಿಗೃಹದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೇಂದ್ರದ ತಂಡವು, ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ, ಮನೆ, ಬೆಳೆ ಹಾನಿ, ಮಾನವ-ಪ್ರಾಣಿ ಹಾನಿ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು.