Friday, 13th December 2024

ಕಲಬುರಗಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ

ಬೃಹತ್ ರೋಡ್ ಶೋ: ಶಕ್ತಿ ಪ್ರದರ್ಶನ

ಕಲಬುರಗಿ: ನಗರದಲ್ಲಿ ಭಾನುವಾರ ಸಂಪೂರ್ಣ ಕೇಸರಿಮಯವಾಗಿತ್ತು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆ ಕಲಬುರಗಿ ನಗರ ಪ್ರವೇಶ ಮಾಡಿದ ಯಾತ್ರೆಯು ರೋಡ್ ಶೋ ಮೂಲಕ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಪ್ರಾರಂಭವಾಗಿ ಜಗತ್ ವೃತ್ತದವರೆಗೆ ಸಾಗಿ ಬಂದು ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಕಲಬುರಗಿ ಉತ್ತರ ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಏಕಕಾಲಕ್ಕೆ ನಡೆದ ವಿಜಯ ಸಂಕಲ್ಪ ಯಾತ್ರೆಗೆ ಮೂರನೇ ತಂಡದ ನೇತೃತ್ವ ವಹಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.

ನಗರೇಶ್ವರ ಶಾಲೆಯಿಂದ ಪ್ರಾರಂಭವಾದ ರೋಡ್ ಶೋ ಬಂಬೂ ಬಜಾರ್, ಹಳೇ ಚೌಕ್ ಪೊಲೀಸ್ ಠಾಣೆ ವೃತ್ತ, ಸೂಪರ್‌ ಮಾರ್ಕೆಟ್, ಜಗತ್ ವೃತ್ತದ ವರೆಗು ರೋಡ್ ಶೋ ಸಾಗಿತು. ಉತ್ತರದಲ್ಲಿ ಕ್ರೇಡೆಲ್ ಅಧ್ಯಕ್ಷ ಚಂದು ಪಾಟೀಲ್ ಹಾಗೂ ಕಲಬುರಗಿ ದಕ್ಷಿಣದಲ್ಲಿ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ನೇತೃತ್ವದಲ್ಲಿ ಭರ್ಜರಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು.

ಮಾರ್ಗದ ಉದ್ದಕ್ಕೂ ಹಲಿಗೆ, ಡೊಳ್ಳು, ಬ್ಯಾಂಡ್, ಡಿಜೆ ಹಾಡುಗಳ ಸೇರಿ ನಾನಾ ವಾದ್ಯ ಮೇಳಗಳು ಕಳೆತಂದವು. ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು, ಬಿಜೆಪಿ ಹೆಸರಿನ ಕೇಸರಿ ಟೊಪ್ಪಿಗೆ ಹಾಕಿಕೊಂಡು ಕುಣಿದು ಕುಪ್ಪಳಿಸಿ ದರು. ಅಪಾರ ಸಂಖ್ಯೆಯಲ್ಲಿ ಸೇರಿದ ಜನರು ಜೈಕಾರ ಮೊಳಗಿಸಿದರು.

ರಸ್ತೆ ಉದ್ದಕ್ಕೂ ಬಿಜೆಪಿ ಧ್ವಜ, ಬ್ಯಾನರ್ ರಾರಾಜಿಸಿದವು. ರೋಡ್ ಶೋ ಸಾಗುವ ಮಾರ್ಗದ‌ ರಸ್ತೆ ಕೇಸರಿಮಯವಾಗಿ ಮಾರ್ಪಟ್ಟಿತ್ತು. ಸುಮಾರು ಹತ್ತು ಸಾವಿರಕ್ಕೂ ಅಧಿಕ ಕಾರ್ಯಕರ್ತರು ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದರು.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ರಸಗೊಬ್ಬರ, ರಾಸಾಯನಿಕ ಹಾಗೂ ‌ನವೀಕರಿಸಹುದಾದ ಇಂಧನ ಮೂಲಗಳ ಖಾತೆ ರಾಜ್ಯ ಸಚಿವ ಭಗವಂತ ‌ಖೂಬಾ, ರಾಜ್ಯ ಸಾರಿಗೆ ಸಚಿವ ಬಿ.ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಸುನೀಲ ವಲ್ಯಾಪುರ, ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ‌ ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಸೇರಿ ಪ್ರಮುಖರು ಇದ್ದರು.