Wednesday, 11th December 2024

ಗಂಗೋನಹಳ್ಳಿ ಗ್ರಾಮದಲ್ಲಿ ಶಾಸಕ ಡಿ.ಸಿ ಗೌರಿಶಂಕರ್ ಅಧ್ಯಕ್ಷತೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ

ತುಮಕೂರು : ಗ್ರಾಮಾಂತರ ಕ್ಷೇತ್ರದ ಗಂಗೋನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಗೋನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರುಗಳು ಆಯೋಜಿಸಲಾಗಿದ್ದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಡಿ.ಸಿ ಗೌರಿಶಂಕರ್ ಅವರನ್ನು ಗ್ರಾಮಸ್ಥರು ತೆರೆದ ವಾಹನದ ಮೂಲಕ ಮೆರವಣಿಗೆಯಲ್ಲಿ ಸ್ವಾಗತಿಸಿದರು.

ಜೆಸಿಬಿಗಳ ಮೂಲಕ ಹೂ ಮಳೆ ಸುರಿಸಿ ಅದ್ದೂರಿಯಾಗಿ ಬರಮಾಡಿಕೊಂಡರು. ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಕುಣಿದು ಕುಪ್ಪಳಿಸುತ್ತಾ ತುಂಬು ಹೃದಯದಿಂದ ಅದ್ದೂರಿಯಾಗಿ ಶಾಸಕರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

ತಾಯಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಿ.ಸಿ ಗೌರಿಶಂಕರ್ ಅವರು ಗಂಗೋನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ತಮ್ಮ ಅವಧಿಯಲ್ಲಿ ಸಿಸಿ ರಸ್ತೆ, ಸಿಸಿ ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕ, ಅಂಬೇಡ್ಕರ್ ಭವನ ನಿರ್ಮಾಣ ಸೇರಿದಂತೆ ಕೋಟ್ಯಾಂತರ ರೂಗಳಲ್ಲಿ ಪಕ್ಷಾತೀತವಾಗಿ ಪ್ರಾಮಾಣಿಕ ವಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ.

ಇಂದು ಸಹ ಕೆರೆ ಬಂಡಿಪಾಳ್ಯ, ಸೂರೇನಹಳ್ಳಿ, ಕೆಂಬಳಲು, ಕೆಂಬಳಲುಪಾಳ್ಯ, ಹುಣಸೆ ಮರದ ಪಾಳ್ಯ, ಗೊಲ್ಲರಹಟ್ಟಿ, ಮಹಿಮನ ಪಾಳ್ಯ, ಜಿಹೆಚ್ ರಿಸಾಲ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಅಭಿವೃದ್ಧಿಪಡಿಸಿ ಮಾತು ಉಳಿಸಿಕೊಂಡಿ ದ್ದೇನೆ. ಬಾಕಿ ಇರುವ ಕಾಮಗಾರಿ ಗಳನ್ನು ಶೀಘ್ರವಾಗಿ ಮುಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಶಾಸಕ ಡಿ.ಸಿ ಗೌರಿಶಂಕರ್ ಅವರು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಗಂಗೋನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿ ರುವ ಅಂಬೇಡ್ಕರ್ ಭವನದ ಉದ್ಘಾಟನೆ ನೆರವೇರಿಸಿ, ಮನೆ ಮನೆಗೆ ನಲ್ಲಿ ಸಂಪರ್ಕ ಕಾಮಗಾರಿಗೆ ಚಾಲನೆ ನೀಡಿದರು. ಗ್ರಾಮಸ್ಥರುಗಳ ಬೇಡಿಕೆಯಾದ ಶ್ರೀ ಲಕ್ಷ್ಮಿ ದೇವಸ್ಥಾನದ ಕಾಂಪೌಂಡ್ ಅನ್ನು ವೈಯಕ್ತಿಕ ಖರ್ಚಿನಿಂದ ಶೀಘ್ರವಾಗಿ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗಂಗೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಮುಖಂಡರುಗಳು, ಕಾರ್ಯಕರ್ತರು, ಸಾರ್ವಜನಿಕರುಗಳು ಉಪಸ್ಥಿತರಿದ್ದರು.