Friday, 13th December 2024

ಮಂಡ್ಯದಲ್ಲಿ 30 ವರ್ಷಗಳ ಬಳಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ…!

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ 30 ವರ್ಷಗಳ ಬಳಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

2024ರ ಫೆಬ್ರವರಿಯಲ್ಲಿ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲು ನಿರ್ಧರಿಸಲಾಗಿದ್ದು, ದಿನಾಂಕ ಇನ್ನೂ ಅಂತಿಮಗೊಳ್ಳಬೇಕಿದೆ. ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು.

ಸಚಿವರು ಮಾತನಾಡಿ, “ಜಿಲ್ಲೆಯಲ್ಲಿರುವ ಕನ್ನಡ ಸಾಹಿತ್ಯ ಆಸಕ್ತರು, ಸಂಘ, ಸಂಸ್ಥೆ, ಸಂಘಟನೆಯ ಮುಖ್ಯಸ್ಥರ‌ ಸಲಹೆ, ಅಭಿಪ್ರಾಯ ಹಾಗೂ ಸೂಚನೆಗಳನ್ನು ಪಡೆದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಜಿಲ್ಲೆಯಲ್ಲಿ‌ ಆಯೋಜಿಸಲಾಗುತ್ತದೆ” ಎಂದು ಹೇಳಿದರು.

1994ರಲ್ಲಿ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಫೆಬ್ರವರಿ 11 ರಿಂದ 13ರ ತನಕ ನಡೆಸಲಾಗಿತ್ತು. 2024ರ ಫೆಬ್ರವರಿ ಯಲ್ಲಿಯೇ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲು ಸಭೆಯಲ್ಲಿ ಚರ್ಚೆಗಳು ನಡೆದವು.

ಸಭೆಯಲ್ಲಿ ಮಾತನಾಡಿದ ಎನ್. ಚೆಲುವರಾಯಸ್ವಾಮಿ, “ಸಮ್ಮೇಳನ ಆಯೋಜಿಸುವ ಸಮಯದಲ್ಲಿ ನಡೆಯವ ಸಭೆಗಳಿಗೆ ಆಹ್ವಾನ ನೀಡಿಲ್ಲ ಎಂದು ಸಾಹಿತ್ತಾ ಸಕ್ತರು ಮನಸ್ತಾಪ ಮಾಡಿಕೊಳ್ಳಬಾರದು. ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲದಿದ್ದರೂ ಲಿಖಿತವಾಗಿ ತಮ್ಮ ಸಲಹೆಗಳನ್ನು ಜಿಲ್ಲಾಡಳಿತಕ್ಕೆ ಕಳುಹಿಸಿ ಕೊಡಬಹುದು” ಎಂದರು.

ಶಾಸಕ ರವಿಕುಮಾರ್ ಮಾತನಾಡಿ, “ಜಿಲ್ಲಾ ಕೇಂದ್ರದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಲು ಎರಡು ಸ್ಥಳಗಳನ್ನು ಗುರುತಿಸಲಾಗಿದೆ. ಸಮ್ಮೇಳನಕ್ಕೆ ಬೇಕಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಕೇಂದ್ರದಲ್ಲಿ ಆಯೋಜಿಸುವಂತೆ” ಮನವಿ‌ ಮಾಡಿದರು.

ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 87ನೇ ಸಮ್ಮೇಳನ ನಡೆಸಲು ಮಂಡ್ಯ ಜಿಲ್ಲೆಗೆ ಅವಕಾಶ ಸಿಕ್ಕಿತ್ತು. ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿಕ್ಕಮಗಳೂರು, ಉತ್ತರ ಕನ್ನಡ, ರಾಮನಗರ, ಬಳ್ಳಾರಿ, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಸಹ ಸಮ್ಮೇಳನ ಆಯೋಜನೆಯ ಸ್ಪರ್ಧೆಯಲ್ಲಿದ್ದವು.