ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆ ಹೋಬಳಿ ಸಬ್ಬೇನಹಳ್ಳಿಗೆ ಬುಧವಾರ ಇದೇ ಪ್ರಥಮ ಬಾರಿಗೆ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಆರಂಭಿಸಿದ್ದು, ಈ ಮೂಲಕ ಗ್ರಾಮಸ್ಥರಲ್ಲಿ ಹರ್ಷ ಮೂಡಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಗ್ರಾಮಕ್ಕೆ ಯಾವುದೇ ಸಾರಿಗೆ ಸೌಲಭ್ಯವಿರಲಿಲ್ಲ.
ವಿದ್ಯಾರ್ಥಿಗಳು, ರೈತರು, ಕೂಲಿ, ಕಾರ್ಮಿಕರು ಕಾಲ್ನಡಿಗೆಯಲ್ಲಿ ಐದು ಕಿಲೋಮೀಟರ್ ದೂರದ ಹಂದನಕೆರೆಗೆ ಬಂದು ಅಲ್ಲಿಂದ ಬಸ್ ಹಿಡಿದು ತಾಲ್ಲೂಕು ಕೇಂದ್ರಗಳಾದ ಚಿಕ್ಕನಾಯಕನಹಳ್ಳಿ, ತಿಪಟೂರಿಗೆ ಹೋಗಬೇಕಾಗಿತ್ತು.
ಇದರಿಂದ ಬೇಸತ್ತ ಗ್ರಾಮಸ್ಥರು ಕೆಆರ್‌ಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಬ್ಬೇನಹಳ್ಳಿ ಶ್ರೀನಿವಾಸ್ ಅವರೊಂದಿಗೆ ಕೆಎಸ್ಆರ್ಟಿಸಿ ವಿಭಾಗೀಯ ಅಧಿಕಾರಿ ಗಳ ಮೇಲೆ ಕಳೆದ ಒಂದೂವರೆ ತಿಂಗಳಿಂದ ಮನವಿ ಸಲ್ಲಿಸಿ ಒತ್ತಡ ಹಾಕುತ್ತಾ ಬಂದಿದ್ದರು. ಅದರ ಫಲವಾಗಿ ಸಬ್ಬೇನಹಳ್ಳಿಗೆ ಬಸ್ ಸಂಪರ್ಕ ಕಲ್ಪಿಸ ಲಾಗಿದೆ.
ತಾಲ್ಲೂಕಿನ ಗಡಿಯ ಸಬ್ಬೇನಹಳ್ಳಿಗೆ ಸರ್ಕಾರಿ ಬಸ್ ಬಂದಾಗ ಗ್ರಾಮದ ಮುಖಂಡರು, ಯುವಕರು ಹಾಗೂ ಮಹಿಳೆಯರು ಸಂತೋಷ ವ್ಯಕ್ತಪಡಿಸಿ ಬಸ್ಗೆನ ಪೂಜೆ ಸಲ್ಲಿಸಿದರು.
ತಿಪಟೂರು-ಮತಿಘಟ್ಟ- ಹಂದನಕೆರೆ ಮೂಲಕ ಸಬ್ಬೇನಹಳ್ಳಿಗೆ ತೆರಳಿ ಮತ್ತೆಅದೇ ಮಾರ್ಗದಲ್ಲಿ ಬಸ್ ವಾಪಸಾಗಲಿದೆ. ನಿತ್ಯ ಎರಡು ಬಸ್ ಗಳು ಈ ಮಾರ್ಗದಲ್ಲಿ ಸಂಚಾರ ನಡೆಸಲಿವೆ. ಇದರಿಂದ ತಿಪಟೂರಿನಲ್ಲಿ ವ್ಯಾಸಂಗ ಮಾಡುವ ಅನೇಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸೌಲಭ್ಯ ಒದಗಿಸಿದ ಕೆ ಎಸ್ ಆರ್ ಟಿ ಸಿ ಎಲ್ಲ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಲಾಯಿತು.
ಗ್ರಾಪಂ ಸದಸ್ಯ ನಿರಂಜನ್ ಮೂರ್ತಿ, ಗ್ರಾಮದ ಮುಖಂಡರಾದ ಸಂತೋಷ್, ಗಜೇಂದ್ರ, ಹೋಟೆಲ್ ನಾಗರಾಜು, ಕೆ ಆರ್ ಎಸ್ ಪಕ್ಷದ ಗುರುಮೂರ್ತಿ ಹಾಗೂ ಗ್ರಾಮಸ್ಥರು ಕೆಆರ್‌ಎಸ್ ಪಕ್ಷಕ್ಕೆ ಜೈಕಾರ ಕೂಗಿದರು.