ಚಿಕ್ಕನಾಯಕನಹಳ್ಳಿ: ತಾಲೂಕು ಆಡಳಿತ, ನೊಳಂಬ ಲಿಂಗಾಯತ ಸ್ವಯಂ ಸೇವಕ ಸಂಘ, ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಕಾಯಕಯೋಗಿ ಶ್ರಿ ಸಿದ್ದರಾಮೇಶ್ವರರ 851ನೆ ಜಯಂತಿ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಬಿ. ಸುರೇಶ್ ಬಾಬು ಮಾತನಾಡಿ, ಸಿದ್ದರಾಮೇಶ್ವರರು ಕಾಯಕ ಯೋಗಿಯಾಗಿ ಜನ ಮನ್ನಣೆ ಗಳಿಸಿದ್ದವರು. ೧೨ನೇ ಶತಮಾನದ ಶರಣರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಗೋಡೆಕೆರೆ ಮಠದ ಸ್ವಾಮೀಜಿಯವರಲ್ಲಿ ಸಿದ್ದರಾಮರ ಪ್ರತಿರೂಪ ಕಾಣುತ್ತೇವೆ ಎಂದರು.
ಶ್ರೀ ಸಿದ್ದರಾಮೇಶ್ವರರ ಅನೇಕ ಗದ್ದುಗೆಗಳು, ದೇವಸ್ಥಾನಗಳು ತಾಲೂಕಿನಾದ್ಯಂತ ಇವೆ. ಅವರು ತಪಸ್ಸು ಮಾಡುತ್ತಿದ್ದ ದೊಣೆಗಂಗಾ ಕ್ಷೇತ್ರದಲ್ಲಿ ನಡೆಯು ತ್ತಿರುವ ಅಭಿವೃದ್ಧಿ ಕೆಲಸಗಳಿಗೆ ತಾಲೂಕು ಆಡಳಿತದ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಪ್ರತೀ ವರ್ಷ ಕರ್ನಾಟಕದ ವಿವಿಧೆಡೆ ನಡೆಯುವ ಶ್ರೀ ಸಿದ್ದರಾಮೇಶ್ವರರ ಜಯಂತ್ಯುತ್ಸವ ತಾಲೂಕಿನ ಗೋಡೇಕೆರೆಯಲ್ಲೂ ಯಶಸ್ವಿಯಾಗಿ ನಡೆಯಿತು. ಯಳನಾಡಿನಲ್ಲಿ ಮತ್ತೆ ಜಯಂತಿ ಆಚರಣೆಗೆ ಸಮುದಾಯದವರು ಮುಂದಾದರೆ ಸಹಕಾರ ನೀಡಲಾಗುವುದು ಎಂದರು.
ಕೃಷಿಕ ತರಬೇನಹಳ್ಳಿ ಷಡಕ್ಷರಿ ಶಂಕರಲಿಂಗಪ್ಪ ಮಾತನಾಡಿ, ಶರಣರ ಜಯಂತ್ಯುತ್ಸವಗಳನ್ನು ಸಂಬಂಧಪಟ್ಟ ಎಲ್ಲ ಸಮುದಾಯಗಳನ್ನು ಒಳಗೊಂಡಂತೆ ಆಚರಿಸುವಂತಾಗಬೇಕು ಎಂದು ತಾಲ್ಲೂಕು ಆಡಳಿತಕ್ಕೆ ಸಲಹೆ ನೀಡಿದರು. ಶಸಾಪ ಅಧ್ಯಕ್ಷ ಬಸವರಾಜು ಹೊನ್ನೇಬಾಗಿ ಶಿವಯೋಗಿ ಶ್ರಿ ಸಿದ್ದರಾಮೇಶ್ವರರ ಕುರಿತು ಉಪನ್ಯಾಸ ನೀಡಿದರು.
ತಹಶೀಲ್ದಾರ್ ಗೀತಾ ಮಾತನಾಡಿ, ಸಿದ್ದರಾಮೇಶ್ವರರು ಹಾಕಿ ಕೊಟ್ಟ ದಾರಿಯಲ್ಲಿ ನಾವು ಸಾಗುವುದು ಕಷ್ಟಕರ. ಅವರ ವಿಚಾರಗಳನ್ನು ನಮ್ಮ ಜೀವನ ದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸೋಣ ಎಂದರು. ಜಿಲ್ಲಾ ನೊಳಂಬ ಕಾರ್ಯಕಾರಿಣಿ ಸದಸ್ಯ ಅಭಿಷೇಕ್, ವಿಜಯ್ ಪಟೇಲ್ ಅರಳಿಕೆರೆ, ಸಿಡಿಪಿಓ ಹೊನ್ನಪ್ಪ, ಎಡಿಎ ಶಿವರಾಜ್ ಇತರರು ಇದ್ದರು.