ಕೆಂಪೇಗೌಡ ಪ್ರತಿಮೆ ಅನಾವರಣ ಪೂರ್ವಭಾವಿ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಬಣ್ಣನೆ
ಚಿಕ್ಕಬಳ್ಳಾಪುರ: ದೇಶದಲ್ಲಿಯೇ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗುತ್ತಿರುವ ಕರ್ನಾಟಕದ ಇಂಜಿನ್ ಆಗಿ ಬೆಂಗಳೂರು ಕಾರ್ಯನಿರ್ವಹಿಸುತ್ತಿದ್ದು, ಇಂತಹ ಇಂಜಿನ್ ನಿರ್ಮಿಸಿದವರು ನಾಡಪ್ರಭು ಕೆಂಪೇಗೌಡರು ಎಂಬು ದನ್ನು ಹೇಳಲು ಹರ್ಷ ವಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಬಣ್ಣಿಸಿದರು.
ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ವಿದ್ಯಾಸಂಸ್ಥೆಯಲ್ಲಿ ಭಾನು ವಾರ ಆಯೋಜಿಸಿದ್ದ ಸ್ಥಳೀಯ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ತಾಯಿಗೆ ನೀಡಿದ ಮಾತಿನಂತೆ ಸಾವಿರಾರು ಕೆರೆಗಳ ನಿರ್ಮಾಣ ಮಾಡುವ ಜೊತೆಗೆ ಪರಿಸರ ಉಳಿವಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಕೆಂಪೇಗೌಡರನ್ನು ಸ್ಮರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
108 ಅಡಿ ಎತ್ತರದ ಪ್ರತಿಮೆ
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗಿದೆ. ಈ ಪ್ರತಿಮೆ ಅನಾವರಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿದ್ದಾರೆ. ನಾಡು ಕಟ್ಟಿದ ಒಬ್ಬ ದಿಗ್ಗಜರಿಗೆ ನಮನ ಸಲ್ಲಿಸಲು ಮತ್ತೊಬ್ಬ ದಿಗ್ಗಜರು ಆಗಮಿಸು ತ್ತಿದ್ದಾರೆ. ಇಂತಹ ಐತಿಹಾಸಿಕ ಕಾರ್ಯಕ್ರಮ ಕಣ್ಣುತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು ಎಂದು ಸಚಿವರು ಕೋರಿದರು.
ಯಾರೇ ಆಗಲಿ ಇಂತಹ ಜಾತಿಯಲ್ಲಿಯೇ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಲು ಸಾಧ್ಯವಿಲ್ಲ. ಆದರೆ ಒಕ್ಕಲಿಗರ ಸಮುದಾಯದಲ್ಲಿ ಜನಿಸಿದ ಕೆಂಪೇಗೌಡರು ಈ ನಾಡು ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಕೆರೆಗಳ ನಿರ್ಮಾಣ, ಪರಿಸರ ಉಳಿಸುವ ಅವರ ಕಾರ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಹಾಗಾಗಿ ಅಂತಹ ಮಹನೀಯರ ಸ್ಮರಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ಕೃಷಿ ಮಾಡುವವರೆಲ್ಲರೂ ಒಕ್ಕಲಿಗರೇ
ಭೂಮಿ ತಾಯಿ ಸೇವೆ ಮಾಡುವವರೆಲ್ಲರೂ ಒಕ್ಕಲಿಗರೇ ಆಗಿದ್ದಾರೆ. ಒಕ್ಕಲಿಗ ಎಂಬುದು ಒಂದು ಜಾತಿಗೆ ಸೀಮಿತವಾಗಿಲ್ಲ. ರಾಜ್ಯ ಬಜೆಟ್ 2.5 ಲಕ್ಷ ಕೋಟಿಯಲ್ಲಿ ಅರ್ಧಕ್ಕೂ ಹೆಚ್ಚು ವರಮಾನ ಬರುತ್ತಿರುವುದು ಬೆಂಗಳೂರಿನಿಂದ. ಇಂತಹ ಬೆಂಗಳೂರು ನಿರ್ಮಿಸಿದವರು ಕೆಂಪೇಗೌಡರು. ಬೆಂಗಳೂರಿನಿಂದ ಇಡೀ ರಾಜ್ಯಕ್ಕೆ ಸಹಕಾರಿಯಾಗಿದೆ ಎಂದರು.
ಸಮಾಜ ಸುಧಾರಕರಾದ ಕೆಂಪೇಗೌಡರನ್ನು ಶಾಶ್ವತವಾಗಿ ಸ್ಮರಣೆ ಮಾಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ.
ಗಣ್ಯರನ್ನು ಜಾತಿಗೆ ಸೀಮಿತ ಮಾಡಲು ಸಾಧ್ಯವಿಲ್ಲ, ಬೆಂಗಳೂರಿನಲ್ಲಿ ಅಂಬೇಡ್ಕರ್ ಕಾಲೇಜನ್ನು ಇತ್ತೀಚಿಗೆ ಪ್ರಧಾನಿಗಳೇ ಉದ್ಘಾಟಿಸಿದರು. ವಾಲ್ಮೀಕಿ ಸಮುದಾಯ ಮೀಸಲಾತಿಗಾಗಿ ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಿದ್ದರೂ
ವಿರೋಧ ಪಕ್ಷಗಳು ಗಮನವನ್ನೇ ಹರಿಸಲಿಲ್ಲ. ಆದರೆ ಬಿಜೆಪಿ ವಿರುದ್ಧ ಆರೋಪ ಮಾಡುವುದರಲ್ಲಿಯೇ 56 ವರ್ಷಕಳೆದು, ಕೇವಲ ಅವರ ಮತ ಪಡೆದು ಮೋಸ ಮಾಡಿದರು ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಮೀಸಲಾತಿ ನೀಡಿದೆ
ಎಸ್ ಸಿ ಮತ್ತು ಎಸ್ ಟಿ ಸಮುದಾಯದವರಿಗೆ ಮೀಸಲಾತಿ ನೀಡಿದ್ದು ಬಿಜೆಪಿ ಸರ್ಕಾರ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗ ಕೆಲಸ ಮಾಡಬೇಕು, ಆದರೆ ಇವರಿಗೆ ಜಾಣಮರೆವು. ಹಾಗಾಗಿಯೇ ಅಧಿಕಾರಕ್ಕೆ ಬಂದ ಕೂಡಲೇ ನೀಡಿದ್ದ ಎಲ್ಲ ಭರವಸೆಗಳನ್ನು ಮರೆತರು ಎಂದು ಲೇವಡಿ ಮಾಡಿದರು.
ಎಲ್ಲ ಸಮುದಾಯಗಳಿಗೂ ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಒತ್ತು ನೀಡುವ ಕೆಲಸ ಬಿಜೆಪಿಯಿಂದ ಮಾತ್ರ ಸಾಧ್ಯ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವ ಮೂಲಕ ಇಡೀ ವಿಶ್ವವೇ ಕೆಂಪೇ ಗೌಡರನ್ನು ಕಾಣುವಂತಾಗಿದೆ. ಅಲ್ಲದೆ ಈ ಪ್ರತಿಮೆಯ ಮುಂದೆ ನಿರ್ಮಿಸುತ್ತಿರುವ ಉದ್ಯಾನವನಕ್ಕೆ ರಾಜ್ಯದ ಎಲ್ಲ ಪುಣ್ಯ ಕ್ಷೇತ್ರಗಳು, ಕೆರೆ ಮತ್ತು ನದಿಗಳಿಂದ ಮಣ್ಣು ಸಂಗ್ರಹ ಮಾಡಿ ತರಲಾಗಿದೆ ಎಂದು ವಿವರಿಸಿದರು.
ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬರುವವರಿಗಾಗಿ ವಾಹನ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ನಾಡಪ್ರಭುಗಳಿಗೆ ಗೌರವ ಸಮರ್ಪಣೆ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗೋವಿಂದಸ್ವಾಮಿ, ಪಿ.ಎನ್. ಕೇಶವರೆಡ್ಡಿ, ಕೋಡಿರಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.