Friday, 13th December 2024

ಕಾರ‍್ಮಿಕರು ಸಂಸ್ಥೆಯ ಬಗ್ಗೆ ಕಾಳಜಿ ವಹಿಸಬೇಕು: ಡಾ.ಭಾನುಪ್ರಕಾಶ್

ತುಮಕೂರು: ಕಾರ‍್ಮಿಕರು ತಮ್ಮ ಸಂಸ್ಥೆಯ ಏಳಿಗೆಯ ಬಗ್ಗೆ ಇರುವಷ್ಟೇ ಕಾಳಜಿಯನ್ನು ತಮ್ಮ ಆರೋಗ್ಯದ ಮೇಲಿದ್ದರೆ ಉತ್ತಮ ಆರೋಗ್ಯದೊಂದಿಗೆ ಸಂಸ್ಥೆಯ ಏಳಿಗೆಯಲ್ಲೂ ಪ್ರಮುಖ ಪಾತ್ರ ವಹಿಸಬಹುದು ಎಂದು ಸಿದ್ಧಗಂಗಾ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಹೆಚ್.ಎಂ. ತಿಳಿಸಿದರು.

ಅವರು ಸಿದ್ಧಗಂಗಾ ಆಸ್ಪತ್ರೆ ಹಾಗೂ ವಸಂತನರಸಾಪುರದಲ್ಲಿನ ನಿಖಿಲ್ ಅಡೆಸ್ಸಿವ್ ಲಿಮಿಟೆಡ್ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ಸಿದ್ಧಗಂಗಾ ಆಸ್ಪತ್ರೆ ಸರ‍್ವಜನಿಕ ಕಳಕಳಿಗಾಗಿ ಆಯೋಜಿಸುವ ಇಂತಹ ಆರೋಗ್ಯ ಶಿಬಿರಗಳಿಂದ ಮತ್ತಷ್ಟು ಆರೋಗ್ಯವಂತರಾಗಿ ನಿಮ್ಮ ಜೀವನಮಟ್ಟ ವನ್ನು ಸುಧಾರಿಸಿಕೊಳ್ಳಿ ಎಂದು ಅಭಿ ಪ್ರಾಯಪಟ್ಟರು.

ನಿಖಿಲ್ ಅಡೆಸ್ಸಿವ್ ಲಿಮಿಟೆಡ್ನ ಮಾನವ ಸಂಪನ್ಮೂಲ ಅಧಿಕಾರಿ ಶಿವರಂಜನ್ ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆ ವರ‍್ಷಿಕ ೨೦೦ ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಸರ‍್ವಜನಿಕರ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತಿದೆ. ಇದೀಗ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಚಿಕಿತ್ಸೆಯನ್ನೂ ನೀಡುವುದು ಸೇವೆಗೆ ಹಿಡಿದ ಕೈಗನ್ನಡಿ. ನಮ್ಮ ಕರ‍್ಮಿಕರಿಗೆ ಆರೋಗ್ಯ ತಪಾಸಣೆಗೆ ನಡೆಸಿದ್ದಕ್ಕೆ ಆಸ್ಪತ್ರೆಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಸಂಸ್ಥೆಯ ೨೦೦ ಕ್ಕೂ ಹೆಚ್ಚು ಕರ‍್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಔಷಧಗಳನ್ನು ವಿತರಿಸಲಾಯಿತು. ಉದ್ಯಮಿ ಹಾಗೂ ಸಮಾಜ ಸೇವಕ ಸುರೇಂದ್ರ ಶಾ, ಸುರೇಶ್, ನಿಖಿಲ್ ಅಡೆಸ್ಸಿವ್ ಸಂಸ್ಥೆಯ ಅವಿನಾಶ್ ಪ್ರಮೋದ್, ನಾರಾಯನ್ ಕುಂದೇರ್, ಸಿದ್ಧಗಂಗಾ ಆಸ್ಪತ್ರೆಯ ಪಿಆರ್ಓ ಕಾಂತರಾಜು ಹಾಗೂ ವೈದ್ಯರು ಹಾಗೂ ಸಿಬ್ಬಂಧಿಗಳು ಹಾಜರಿದ್ದರು.