Wednesday, 11th December 2024

ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಕೂರು ಆನಂದ ನಿಧನ

ಲಬುರಗಿ: ಪ್ರತಿಭಾವಂತ ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಕೂರು ಆನಂದ ಅವರು ಮೇ 20ರಂದು ನಿಧನ (Death news) ಹೊಂದಿದ್ದಾರೆ.

ಪೊಲೀಸರು ಇದೊಂದು ಅನುಮಾನಾಸ್ಪದ ಸಾವು ಎಂದು ‌ದೂರು ದಾಖಲಿಸಿಕೊಂಡಿದ್ದಾರೆ.

44 ವರ್ಷ ಪ್ರಾಯದ ಲಕ್ಕೂರು ಸಿ. ಆನಂದ ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರಿನವರು. ದಲಿತ- ಬಂಡಾಯ ಕವಿ, ಸಂಶೋಧಕ, ವಿಮರ್ಶಕ, ಸಂಘಟನಾಕಾರ, ಅನುವಾದಕಾರ ಆಗಿದ್ದರು. ಕೆಂಗೇರಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆನಂದ ಅವರು ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಹೊರತಂದಿದ್ದಾರೆ. ಮಾತಂಗ ಮಾದಿಗರ ಸಂಸ್ಕೃತಿಯ ಬಗ್ಗೆ ಅವರು ಆಳವಾದ ಅಧ್ಯಯನ ನಡೆಸಿದ್ದಾರೆ.

ಇತ್ತೀಚೆಗೆ ತೆಲುಗು ಭಾಷೆಯಿಂದ ರಾಣಿ ಶಿವ ಶಂಕರ ಶರ್ಮರ ‘ಕೊನೆಯ ಬ್ರಾಹ್ಮಣ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ, ಆಂಧ್ರದ ಶ್ರೀ ಶ್ರೀ ಕಾವ್ಯ, ದೆಹಲಿಯ ದಲಿತ ಸಾಹಿತ್ಯ ಪರಿಷತ್ತು ಪ್ರಶಸ್ತಿ, ದು ನಿಂ ಬೆಳಗಲಿ ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ, ಡಾ ತಿಪ್ಪೇರುದ್ರ ಸ್ವಾಮಿ ಪ್ರಶಸ್ತಿ ಆನಂದರಿಗೆ ಸಂದಿದೆ.

ಆನಂದ್ ಅವರ ಶವ ಆಳಂದ‌ ತಾಲೂಕಿನ‌ ಕಡಗಂಚಿ ಬಳಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇವರು ಪಿಎಚ್‌ಡಿ ಮಾಡುತ್ತಿದ್ದರು. ಸ್ಥಳಕ್ಕೆ ನರೋಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.