ಬೆಂಗಳೂರು: ಲಾಲ್‌ಬಾಗ್ ಮಾವಿನ ಮೇಳಕ್ಕೆ ದಿನಾಂಕ ನಿಗದಿಯಾಗಿದೆ. ಹಣ್ಣುಗಳ ರಾಜ ಮಾವಿನ ಹಣ್ಣು ಮಾರುಕಟ್ಟೆಗಳಲ್ಲಿ ಸದ್ಯ ದುಬಾರಿ ಯಾಗಿದೆ. ನೀರಿಲ್ಲದೇ, ಬಿಸಿಲಿನ ಝಳಕ್ಕೆ ಈ ಬಾರಿ ಮಾವಿನ ಇಳುವರಿ ಕುಂಠಿತಗೊಂಡಿದೆ. ಹೀಗಾಗಿ ದರ ಕೂಡ ದುಬಾರಿಯಾಗಿದೆ. ಆದರೂ ಬೆಂಗಳೂರಿನ ಜನ ಖರೀದಿಸುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಗರದ ಲಾಲ್‌ಬಾಗ್‌ನಲ್ಲಿ ಮಾವಿನ ಮೇಳ ನಡೆಯಲಿದ್ದು, ಈಗಾಗಲೇ ಭರ್ಜರಿ ಸಿದ್ಧತೆ ಆರಂಭಗೊಂಡಿದೆ. ಮೇ 24 ರಿಂದ ಜೂನ್ 10 ರವರೆಗೂ ಲಾಲ್‌ಬಾಗ್‌ನಲ್ಲಿ ಬೃಹತ್ ಮಾವು ಹಾಗೂ ಹಲಸಿನ ಮೇಳ ನಡೆಸಲು ಮಾವು ಅಭಿವೃದ್ಧಿ ನಿಗಮ ಹಾಗೂ ಲಾಲ್ ಬಾಗ್ ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಲಾಲ್‌ಬಾಗ್‌ನ ಮಾವು ಮತ್ತು ಹಲಸಿನ ಮೇಳದಲ್ಲಿ ಜಿಕೆವಿಕೆ, ಐಐಎಚ್‌ಆರ್ ಸೇರಿದಂತೆ ಇತರ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಹಲಸಿನ ತಳಿಗಳು, ರೈತರು ಬೆಳೆದ ವಿವಿಧ ತಳಿಯ ಹಲಸಿನ ಹಣ್ಣನ್ನು ಮಾರಾಟ ಮಾಡಲಾಗುತ್ತದೆ. ಹಾಗೂ ಮಾವಿನ ಮೇಳಕ್ಕೆ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ಹಾವೇರಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ಮಾವು ಬೆಳೆಗಾರರು ಮೇಳದಲ್ಲಿ ಭಾಗವಹಿಸಲಿದ್ದು, ಬಾದಾಮಿ, ರಸಪುರಿ, ಸೇಂಧೂರ, ಮಲಗೋವ, ನೀಲಂ, ಮಲ್ಲಿಕಾ ಸೇರಿದಂತೆ ವಿವಿಧ ಬಗೆಯ ಮಾವಿನ ಹಣ್ಣುಗಳ ಮಾರಾಟ ನಡೆಯಲಿದೆ.
ಲಾಲ್‌ಬಾಗ್‌ನಲ್ಲಿ ನಡೆಯುವ ಬೃಹತ್ ಮಾವು ಹಾಗೂ ಹಲಸಿನ ಮೇಳದಲ್ಲಿ ಭಾಗಿಯಾಗಲು ಸಿಲಿಕಾನ್ ಸಿಟಿ ಜನರು ಉತ್ಸುಕರಾಗಿದ್ದು, ಮೊದಲೆಲ್ಲಾ ಮಾರುಕಟ್ಟೆಗೆ ದರಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆ ದರದಲ್ಲಿ ಇಲ್ಲಿ ಮಾವಿನ ಹಣ್ಣು ಹಾಗೂ ಹಲಸಿನ ಹಣ್ಣುಗಳು ಖರೀದಿಗೆ ಲಭ್ಯವಿರುತ್ತಿದ್ದವು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಮಾವಿನ ಇಳುವರಿ ಕುಸಿದಿದ್ದು, ದರ ದುಬಾರಿ ಇರುವ ಸಾಧ್ಯತೆ ಕೂಡ ಹೆಚ್ಚಿದೆ. ಆದರೆ, ಪಾರಂಪರಿಕ ಮಾವಿನ ತಳಿಗಳು ಸೇರಿದಂತೆ ವಿವಿಧ ಬಗೆಯ ಮಾವು ಹಾಗೂ ಹಲಸಿನ ಹಣ್ಣುಗಳು ಒಂದೇ ಸ್ಥಳದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.