Friday, 13th December 2024

ಒತ್ತಡ ಕಡಿಮೆ ಮಾಡುವಂತೆ ಗ್ರಾಮ ಆಡಳಿತಾಧಿಕಾರಿಗಳು ಒತ್ತಾಯ

ತುಮಕೂರು: ಗ್ರಾಮ ಅಡಳಿತಾಧಿಕಾರಿಗಳ ಮೇಲಿನ ಕಾರ್ಯ ಒತ್ತಡ ಕಡಿಮೆ ಮಾಡಬೇಕು,ಅಗತ್ಯ ಮೂಲಭೂತ ಸೌಕರ್ಯ,ತರಬೇತಿ ನೀಡುವಂತೆ ಕೋರಿ ಸೋಮವಾರ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ, ತುಮಕೂರು ಜಿಲ್ಲಾ ಶಾಖೆವತಿಯಿಂದ ಕಂದಾಯ ಸಚಿವರು,ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರುಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಜಿಲ್ಲಾ ಸರಕಾರಿ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ  ನೇತೃತ್ವದಲ್ಲಿ 400ಕ್ಕೂ ಹೆಚ್ಚು ಗ್ರಾಮ ಆಡಳಿತಾಧಿ ಕಾರಿಗಳು ಜಿಲ್ಲಾಧಿಕಾರಿಗಳಿಗೆ ನಮ್ಮ ಮನವಿಗೆ ಸ್ಪಂದಿಸುವಂತೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ದೇವರಾಜು, ಸರಕಾರ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ರೈತರೊಂದಿಗೆ ನೇರ ಸಂಪರ್ಕದಲ್ಲಿ ಕೆಲಸ ಮಾಡುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಯಾವುದೇ ಮೂಲಭೂತ ಸೌಕರ್ಯ ಒದಗಿಸದೆ ಮೊಬೈಲ್ ಅಫ್ ಮೂಲಕ ಲ್ಯಾಂಡ್ ಬಿಟ್ ಕೆಲಸ ಮಾಡಲು ಗುರಿ ನಿಗಧಿ ಪಡಿಸಿದ್ದಾರೆ.ಅಲ್ಲದೆ ರಜಾ ದಿನಗಳಲ್ಲಿಯೂ ಕಾರ್ಯನಿರ್ವಹಿಸುವಂತೆ ಒತ್ತಡ ಹೇರಲಾಗುತ್ತಿದೆ.ಇದರಿಂದ ಗ್ರಾಮ ಆಡಳಿತ ಅಧಿಕಾರಿಗಳ ಮಾನಸಿಕ ಒತ್ತಡ ಹೆಚ್ಚಾಗುತ್ತಿದ್ದು,ಇದೇ ರೀತಿ ಕೆಲಸದ ಒತ್ತಡದಿಂದ ಕಲ್ಬುರ್ಗಿಯಲ್ಲಿ ಓರ್ವ ಗ್ರಾಮ ಆಡಳಿತ ಅಧಿಕಾರಿ ಹೃದಯಾಘಾತಕ್ಕೆ ಒಳಗಾಗಿದ್ದು, ಹಲವಾರು ರೋಗಗಳಿಗೆ ತುತ್ತಾಗುತಿದ್ದಾರೆ.ಹಾಗಾಗಿ ಲ್ಯಾಡ್‌ಬೀಟ್‌ಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಬೇಕೆಂಬುದು ನಮ್ಮ ಒತ್ತಾಯ ವಾಗಿದೆ ಎಂದರು.
ಸರಕಾರಿ ಆಸ್ತಿಗಳ ರಕ್ಷಣೆ ವಿಷಯದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದು,ಅಕ್ರಮವಾಗಿ ಮರಳು ತೆಗೆಯುವ ಪ್ರಕರಣಗಳನ್ನು ತಡೆಯುವಂತಹ ಹಂತದಲ್ಲಿ ದಂಧೆಕೋರರ ದ್ವೇಷಕ್ಕೆ ಹಲವರು ಬಲಿಯಾಗಿದ್ದಾರೆ.ಆರ್.ಟಿ.ಸಿ. ತಿದ್ದುಪಡಿಗೆ ಸೂಕ್ತ ದಾಖಲೆಗಳಿಲ್ಲದೆ ನಿಗಧಿತ ಸಮಯ ದಲ್ಲಿ ದಾಖಲೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.ಕಾರ್ಯಒತ್ತಡದಿಂದ ಶಶಿಕಾಂತೇಗೌಡ,ಶಿವಲಿAಗಯ್ಯ ಎಂಬ ಇಬ್ಬರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದು,ಇಂತಹ ಪ್ರಕರಣಗಳು ಮರುಕಳುಹಿಸದಂತೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂಬುದು ನಮ್ಮ ಕೋರಿಕೆಯಾಗಿದೆ ಎಂದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ,ನನ್ನ ಹಂತದಲ್ಲಿ ಆಗುವ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲು ಸಿದ್ದರಿದ್ದೇವೆ.ಉಳಿದ ಸಮಸ್ಯೆಗಳ ಕುರಿತು ಸರಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಗ್ರಾಮ ಅಡಳಿತ ಅಧಿಕಾರಿಗಳ ಸಂಘದ ಗೌರವಾಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಭಕ್ತವತ್ಸಲ,ಖಜಾಂಚಿ ಮೋಹನ್ ಸೇರಿದಂತೆ ಎಲ್ಲಾ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.