ತುಮಕೂರು: ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಮನಸ್ಸಿಗೆ ನೋವಾಗಿತ್ತು. ನನ್ನ ಒಳ್ಳೆಯತನ, ನಿಷ್ಠೆಯನ್ನು ದುರುಪಯೋಗ ಮಾಡಿಕೊಳ್ಳಲಾಗಿತ್ತು. ಖಾತೆ ಬದಲಾವಣೆ ಮಾಡುವ ಮೂಲಕ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದೆ. ರೆಬಲ್ ಆಗಿದ್ದು ನಿಜ. ಗಣರಾಜ್ಯೋತ್ಸವ ಧ್ವಜಾರೋಹಣದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದು ಸತ್ಯ’ ಎಂದು ಮಂಗಳವಾರ ತಿಳಿಸಿದರು.
ಯಾವುದಾದರೂ ಖಾತೆ ಕೊಡಿ. ಆದರೆ ಬದುಕಿನೊಂದಿಗೆ ಬೆಸೆಯುವ ಹಾಗೂ ಜನರೊಂದಿಗೆ ಇದ್ದುಕೊಂಡು ಕೆಲಸ ಮಾಡುವ ಖಾತೆ ನೀಡಿ ಎಂದಿದ್ದೆ. ಸಣ್ಣ ನೀರಾವರಿ ಖಾತೆ ಯಾರಿಗೂ ಬೇಡವಾಗಿತ್ತು. ಯಾವುದಾದರೂ ಪ್ರಮುಖ ಖಾತೆ ಜತೆಗೆ ನೀಡು ತ್ತಿದ್ದರು. ಸಚಿವನಾದ ನಂತರ ಅದರಲ್ಲಿ ಒಂದಷ್ಟು ಕೆಲಸ ಮಾಡಿ ತೋರಿಸಿದ್ದೇನೆ. ರಾಜೀನಾಮೆ ನೀಡದಂತೆ ಕೆಲ ಪ್ರಮುಖರು, ಮಠಾಧೀಶರು ಸಲಹೆ ಮಾಡಿದ್ದಾರೆ. ಮತ್ತೆ ಸಣ್ಣ ನೀರಾವರಿ ಖಾತೆ ನೀಡಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.