Wednesday, 11th December 2024

ನ.25ರಂದು ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ

ಮಂಡ್ಯ: ಬಸದಿ ಹೊಸಕೋಟೆ ಗ್ರಾಮದಲ್ಲಿ ಬಾಹುಬಲಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ಕೆ ಅದ್ಧೂರಿ ಚಾಲನೆ ದೊರೆತಿದೆ.

ಶ್ರವಣ ಬೆಳಗೊಳದ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಅಮರಕೀರ್ತಿ ಯುಗಳ ಮುನಿಗಳ ದಿವ್ಯಸಾನಿಧ್ಯ ದಲ್ಲಿ ಪುನರ್ ಪ್ರತಿಷ್ಠಾಪನಾ ಕಾರ್ಯ ಭರದಿಂದ ಸಾಗುತ್ತಿದ್ದು, ನ.25ರಂದು ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿ ಷೇಕ ನಡೆಯಲಿದೆ.

ಸುಮಾರು 17 ಅಡಿ ಎತ್ತರದ ವೈರಾಗ್ಯಮೂರ್ತಿ ಭಗವಾನ್ ಬಾಹುಬಲಿ ಮೂರ್ತಿಯ ಪುನರ್ ಪ್ರತಿಷ್ಠಾಪನಾ ಕಾರ್ಯವನ್ನು ಭಗವಾನ್ ಬಹುಬಲಿ ದಿಗಂಬರ ಜೈನ ಟ್ರಸ್ಟ್ ಹಮ್ಮಿಕೊಂಡಿದೆ.

ಭಗವಾನ್ ಬಾಹುಬಲಿಯ ಏಕಶಿಲಾಮೂರ್ತಿ ಹಾಗೂ ವಿವಿಧ ತೀರ್ಥಂಕರರ ಮೂರ್ತಿಗಳು ಹಾಗೂ ಮಂಟಪಗಳನ್ನು ಹೊಯ್ಸಳ ದೊರೆ ಬಿಟ್ಟಿದೇವ(ವಿಷ್ಣುವರ್ಧನ)ನ ಆಪ್ತ ದಂಡನಾಯಕ ನಾಗಿದ್ದ ಪುಣಿಸಿಮಯ್ಯನು ಕ್ರಿ.ಶ.1147ರಲ್ಲಿ ನಿರ್ಮಿಸಿ ದ್ದನು ಎಂದು ಶಿಲಾ ಶಾಸನದಿಂದ ತಿಳಿದುಬಂದಿದೆ.

ಶ್ರೀಕ್ಷೇತ್ರವನ್ನು ತಲತಲಾಂತರದಿಂದ ಜೈಹನ ಶ್ರಾವಕ, ಶ್ರಾವಕಿಯರು ಹಾಗೂ ಟ್ರಸ್ಟ್ ಸದಸ್ಯರು ಸಂರಕ್ಷಿಸಿಕೊಂಡು ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ತೆರೆಯ ಮರೆಯಲ್ಲಿದ್ದ ಬಾಹುಬಲಿಯ ಶಿಲಾಮೂರ್ತಿಯನ್ನು ಕೃಷ್ಣರಾಜ ಸಾಗರದ ಹಿನ್ನೀರಿಗೆ ಹೊಂದಿಕೊಂಡಂತೆ 15 ಅಡಿ ಎತ್ತರದ ವಿಶಾಲವಾದ ಜಗುಲಿಯ ಮೇಲೆ ಪೂರ್ವಾಭಿಮುಖವಾಗಿ ಪ್ರತಿಷ್ಠಾ ಪನೆ ಮಾಡಲಾಗಿದ್ದು ಭಿನ್ನಗೊಂಡಿದ್ದು ಹಾನಿಗೊಳಗಾಗಿದ್ದ ತೀರ್ಥಂಕರರ ಶಿಲಾಮೂರ್ತಿಗಳನ್ನು ನೂತನವಾಗಿ ಪುನರ್ ನಿರ್ಮಿಸಿ ವಿಶೇಷವಾದ ಪೂಜೆ ಪುರಸ್ಕಾರಗಳನ್ನು ನಡೆಸಿ ಅಭಿಷೇಕ ಮಾಡಿ ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಶ್ರವಣಬೆಳಗೊಳ ಕ್ಷೇತ್ರಕ್ಕೆ ಕೇವಲ 45ಕಿ.ಮೀ ದೂರದಲ್ಲಿರುವ ಕೆ.ಆರ್.ಪೇಟೆ ತಾಲೂಕಿನ ಬಸದಿ ಹೊಸಕೋಟೆ ಜೈನಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿ ಕಾರಿಗಳಾದ ಡಾ.ಡಿ.ವೀರೇಂದ್ರಹೆಗಡೆ ಅವರ ಮಾರ್ಗದರ್ಶನದಲ್ಲಿ ಬಸದಿ ಹೊಸಕೋಟೆ ಜೈನ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳು ಭರದಿಂದ ನಡೆಯುತ್ತಿವೆ.

ಭಗವಾನ್ ಬಾಹುಬಲಿಸ್ವಾಮಿಯ ಪುನರ್ ಪ್ರತಿಷ್ಠಾಪನೆ ಹಾಗೂ ಸಿದ್ಧಚಕ್ರದ ಆರಾಧನಾ ಮಹೋತ್ಸವವು ಅಲ್ಲದೆ ನ.25ರಂದು ಮಹಾಮಸ್ತಕಾಭಿಷೇಕವನ್ನು ಶ್ರದ್ಧಾಭಕ್ತಿಯಿಂದ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.