ಬೆಂಗಳೂರು: ಮಂಡ್ಯದಲ್ಲಿ ಡಿಸೆಂಬರ್ 20, 21, 22 ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರೊಂದಿಗೆ ಸಭೆ ನಡೆಸಿದ ನಂತರ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಈ ಹಿಂದೆ ಜೂನ್ ತಿಂಗಳಲ್ಲಿ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಮುಂದೂಡ ಲಾಗಿತ್ತು. ಇದೀಗ ಡಿಸೆಂಬರ್ ತಿಂಗಳಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ.
ರಾಜ್ಯದ, ಹೊರರಾಜ್ಯ ಹಾಗೂ ವಿದೇಶದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮ್ಮೇಳನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸರ್ಕಾರ ಜಿಲ್ಲಾಡಳಿತ, ಸಾಹಿತ್ಯ ಪರಿಷತ್ತಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಆಯ್ಕೆ ಯಾದ ಕೂಡಲೇ ಮಾಹಿತಿ ನೀಡಲಾಗುವುದು. ಜಿಲ್ಲಾಡಳಿತ, ಸಾಹಿತ್ಯ ಪರಿಷತ್ತಿನವರು ಸಾಹಿತಿಗಳ ಪಟ್ಟಿ ಒದಗಿಸಿದ ನಂತರ ಸರ್ಕಾರದೊಂದಿಗೆ ಚರ್ಚಿಸಿ ಅಂತಿಮಗೊಳಿಸಲು ತೀರ್ಮಾನಿಸಲಾಯಿತು ಎಂದರು.
ಮಂಡ್ಯದಲ್ಲಿ 48 ನೇ ಸಾಹಿತ್ಯ ಸಮ್ಮೇಳನ 1974 ರಲ್ಲಿ ಜಯದೇವಿ ತಾಯಿ ಲಿಗಾಡೆ ಅಧ್ಯಕ್ಷತೆಯಲ್ಲಿ, 63 ನೇ ಸಾಹಿತ್ಯ ಸಮ್ಮೇಳನ 1994 ರಲ್ಲಿ ಡಾ. ಚದುರಂಗ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಇದೀಗ ಮೂರನೇ ಬಾರಿ ಸಮ್ಮೇಳನ ಆಯೋಜಿಸಲಾಗುತ್ತಿದೆ.