Wednesday, 11th December 2024

ದಂತ ದೋಚಿದ ಪ್ರಕರಣ: ಸಂಸದ ಪ್ರಜ್ವಲ್ ವಿರುದ್ದ ಮನೇಕಾ ದೂರು

ಹಾಸನ: ವಿದ್ಯುತ್​ ಶಾಕ್​ ನೀಡಿ ಆನೆ ಕೊಂದು, ದಂತ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಂಸದೆ, ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮನೇಕಾ ಗಾಂಧಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಈ ಗಂಭೀರ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಪ್ರಜ್ವಲ್​ ರೇವಣ್ಣ ಒತ್ತಡ ಹೇರಿದ್ದಾರೆ ಎಂದು ಪತ್ರದಲ್ಲಿ ಆರೋಪ ಮಾಡಿದ್ದಾರೆ.

ಹಾಸನ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಚಂದ್ರೆಗೌಡ ಮತ್ತು ತಮ್ಮಯ್ಯ ಎಂಬವರು ಅಕ್ರಮವಾಗಿ ವಿದ್ಯುತ್ ಹರಿಸಿ ಒಂಟಿ ಸಲಗವನ್ನು ಕೊಂದು, ಅದರ ದಂತವನ್ನು ದೋಚಿ ಹೂತು ಹಾಕಿದ್ದರು. ನಂತರ ದಂತವನ್ನು ಮಾರಾಟ ಮಾಡುವ ವೇಳೆ ಕಳೆದ ಮಾರ್ಚ್ 19 ರಂದು ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿರುವ ಹಾಸನದ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ. ಆದರೆ, ಆರೋಪಿಗಳ ರಕ್ಷಣೆಗೆ ಸ್ಥಳೀಯ ವಲಯ ಅರಣ್ಯಾಧಿಕಾರಿ ಭಾರಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಪತ್ರದಲ್ಲಿ ಮನೇಕಾ ಗಾಂಧಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಪ್ರಕರಣವನ್ನು ವರ್ಗಾಯಿಸಲು ಸಿ.ಕೆ. ಅಚ್ಚುಕಟ್ಟು ಪ್ರದೇಶದ ಪೊಲೀಸರಿಗೆ ಪ್ರಜ್ವಲ್ ರೇವಣ್ಣ ಅವರು ಒತ್ತಡ ಹಾಕಿದ್ದಾರೆ ಎಂದು ದೂರಿದ್ದಾರೆ.

ಪ್ರಕರಣದಲ್ಲಿ ಸಿಎಂ ಬೊಮ್ಮಾಯಿ ಅವರು ಮಧ್ಯಪ್ರವೇಶಿಸಿ, ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸಲು ಸೂಚನೆ ನೀಡುವಂತೆ ಒತ್ತಾಯಿಸಿ ಸಂಸದೆ ಮನೇಕಾ ಗಾಂಧಿ ಪತ್ರ ಬರೆದಿದ್ದಾರೆ.