Friday, 13th December 2024

ಸುರಗಿರಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಉಪಯುಕ್ತ ಪುಸ್ತಕ

ತುಮಕೂರು: ಡಾ.ಆರ್.ನಾಗರಾಜ್ ಅವರ ಅಂಕಣ ಬರಹಗಳ ಸಂಗ್ರಹ ಸುರಗಿರಿ ಪುಸ್ತಕ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಲೇಖನ, ಅಂಕಣ ಹೇಗೆ ಬರೆಯಬೇಕು ಎನ್ನುವ ಅಂಶಗಳನ್ನು ಅರಿಯಲು ಉಪಯುಕ್ತ ಪುಸ್ತಕ ಎಂದು ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಕನ್ನಡ ವಿಭಾಗ ಹಾಗೂ ಪತ್ರಿಕೋದ್ಯಮ ವಿಭಾಗದ ಹಾಗೂ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಸಹಯೋಗದೊಂದಿಗೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಡಾ.ಎಚ್.ಎಂ. ಗಂಗಾಧರಯ್ಯ ಉಪನ್ಯಾಸ ಮಾಲಿಕೆ-10 ಹಾಗೂ ಡಾ.ಆರ್.ನಾಗರಾಜ್ ರವರ ಸುರಗಿರಿ ಪುಸ್ತಕ ಹಾಗೂ ಸಿದ್ದಾರ್ಥ ಸಂಪದ ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ ದರು.
ಶ್ರೀಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯಾಗಿ, ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ, ಪತ್ರಕರ್ತರಾಗಿರುವ ಡಾ.ಆರ್.ನಾಗರಾಜ್ ಅವರ ಕೃತಿಯನ್ನು ಅವರ ಓದಿದ ಕಾಲೇಜಿನಲ್ಲೇ ಬಿಡುಗಡೆ ಮಾಡುತ್ತಿರುವುದು ಸಂತಸದ ವಿಷಯ ಎಂದ ಅವರು, ಪತ್ರಿಕಾ ವೃತ್ತಿ ಇಂದು ಉದ್ಯಮವಾಗಿ ಬದಲಾಗುತ್ತಿದೆ. ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡು ಅಭಿವ್ಯಕ್ತಿಗೊಳಿಸುವಾಗ ನಾವುಗಳು ಮಾಡುವ ಸಂವಹನ ಸಂಪರ್ಕ ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕು, ಪತ್ರಕರ್ತರಾಗುವವರು ಸಮಾಜದ ಕಟ್ಟ ಕಡೆಯ ಸಾಮಾನ್ಯ ವ್ಯಕ್ತಿ ಸೇರಿದಂತೆ ರಾಷ್ಟ್ರಪತಿವರೆಗೂ ಸಂಪರ್ಕ ಸಾಧಿಸುವ ಪತ್ರಕರ್ತರು ಹೆಚ್ಚಿನ ಕೌಶಲ್ಯ ಹೊಂದಿರ ಬೇಕು, ಎಲ್ಲಾ ರಂಗಗಳಲ್ಲಿ ಇರುವಂತೆ ಪತ್ರಿಕಾ ರಂಗದಲ್ಲೂ ಲೋಪದೋಷಗಳಿವೆ. ಆದಾಗ್ಯೂ ಮೌಲ್ಯಯುತ ಪತ್ರಿಕೋದ್ಯಮ ಹಾಗೂ ಪತ್ರಕರ್ತರಿಗೆ ಸಮಾಜದಲ್ಲಿ ಗೌರವ ಇದ್ದೇ ಇದೆ ಎಂದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ರಮೇಶ್ ಮಣ್ಣೆ ಮಾತನಾಡಿ, ಪ್ರಚಲಿತ ಘಟನೆ ಬಗ್ಗೆ ತಿಳಿಯಲು ಪತ್ರಿಕೆ ಓದು ಅಗತ್ಯ. ಪತ್ರಿಕಾ ಕ್ಷೇತ್ರದ ಬಗ್ಗೆ ಇಂದಿನ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಮೂಲಕ ಸಂವಹನ ಕೌಲಶ್ಯವೃದ್ಧಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ವಿಜಯ ಭಾಸ್ಕರ್ ಮಾತನಾಡಿ ಪ್ರತಿನಿತ್ಯ ವಾಕಿಂಗ್ ಮಾಡಿದ ನಂತರ ಪತ್ರಿಕೆಯನ್ನ ಓದದೆ ಹೋದರೆ ನಮ ನಿತ್ಯ ಜೀವನ ಸಾಗುವುದಿಲ್ಲ ಇಂತಹ ಪತ್ರಿಕೆಯನ್ನು ಹೊರತರುವ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿ ಬರುವ ವಿವಿಧ ಅಂಕಣ ವಸ್ತು ವಿಷಯವನ್ನು ಸಂಪಾದಿಸಿಕೊಂಡು ಅಧ್ಯಯನ ಶೀಲರಾಗಿ ಸಮ ಸಮಾಜದ ನಿರ್ಮಾಣಕ್ಕೆ ಕಾರಣರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಹರೀಶ್ ಕುಮಾರ್ ಬಿ.ಸಿ, ವಾಣಿಜ್ಯ ವಿಭಾಗದ ಪ್ರೊ. ಸೈಯದ್ ಬಾಬು, ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಪಕರಾದ ಡಾ.ನಾಗೇಂದ್ರ, ಜ್ಯೋತಿ, ರವಿಕುಮಾರ್ ಸೇರಿದಂತೆ ಕಾಲೇಜಿನ ವಿವಿಧ ಭಾಗದ ಮುಖ್ಯಸ್ಥರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಕಾವ್ಯ ನಿರೂಪಿಸಿದರೆ, ಹರ್ಷಿತಾ ಸ್ವಾಗತಿ, ದಿವ್ಯಾ ವಂದಿಸಿದರು.