Friday, 13th December 2024

ಪೀಠಾರೋಹಣದ ಬೆಳ್ಳಿಹಬ್ಬ: ಪೂರ್ವಭಾವಿ ಸಭೆ

ತಿಪಟೂರು: ಸಿಡ್ಲೇಹಳ್ಳಿ ಮಹಾಸಂಸ್ಥಾನ ಮಠ ಶ್ರೀ ಗುರುಕುಲಾನಂದಾಶ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಸದ್ಭಕ್ತರು ಶ್ರೀ ಗುರುಕುಲ ವಿದ್ಯಾರ್ಥಿ ನಿಲಯ ಸ್ಥಾಪನೆಯ ಶತಮಾನೋತ್ಸವ ಮತ್ತು ಸದ್ಗುರು ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಮಹಾ ಸ್ವಾಮಿಗಳವರ ಪೀಠಾರೋಹಣದ ಬೆಳ್ಳಿಹಬ್ಬದ ಆಚರಣೆಯ ಅಂಗವಾಗಿ ಪೂರ್ವಭಾವಿ ಸಭೆ ಏರ್ಪಾಡಾಗಿತ್ತು.

ಸಭೆಯ ದಿವ್ಯ ಸಾನ್ನಿಧ್ಯವನ್ನು ಸದ್ಗುರು ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮಿ ಗಳವರು ವಹಿಸಿದ್ದರು. ಹಾಗಲವಾಡಿ ರಾಜಗುರು ಪರಂಪರೆಯ ಸಿಡ್ಲೇಹಳ್ಳಿ ಮಹಾಸಂಸ್ಥಾನ ಶ್ರೀಮಠದ ಹಿಂದಿನ ಮಹಾಮಹಿಮಾನ್ವಿತ ಗುರುಗಳ ಸೇವೆ, ತ್ಯಾಗ, ಸಾಧನೆಗಳನ್ನು ಸ್ಮರಿಸಿ ೧೯೨೨ರಲ್ಲಿ ತಿಪಟೂರಿನಲ್ಲಿ ಗುರುಕುಲಾನಂದಾಶ್ರಮ ಸ್ಥಾಪಿಸಿದ ಲಿಂಗೈಕ್ಯ ಜಗದ್ಗುರು ಪಟ್ಟದ ಕರಿ ಬಸವದೇಶಿಕೇಂದ್ರ ಸ್ವಾಮಿಗಳು ಸ್ವಯಂ ಕಠಿಣ ಪರಿಶ್ರಮದಿಂದ ಆ ದಿನಗಳಲ್ಲೇ ಕಾಶಿ, ಕಲ್ಕತ್ತಾ ವಿದ್ಯಾಲಯಗಳಲ್ಲಿ ಉನ್ನತ ವಿದ್ಯಾಭ್ಯಾಸ ಹೊಂದಿ ನ್ಯಾಯ, ತರ್ಕಶಾಸ್ತç ಪ್ರವೀಣರಾಗಿ ಸಮಾಜವನ್ನು ಸಂಘಟಿಸಿ ನಾಡಿನಾದ್ಯಾಂತ ಹಲವಾರು ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಪ್ರೇರಕರಾಗಿದ್ದು, ಗ್ರಾಮೀಣ ಮಕ್ಕಳ ವಿದ್ಯಾಭಿವೃದ್ಧಿಗೆ ಶ್ರಮಿಸಿದ್ದನ್ನು ಸ್ಮರಿಸಿದರು.

ಈ ವಿದ್ಯಾರ್ಥಿ ನಿಲಯದಲ್ಲಿ ಅನ್ನಾಶ್ರಯ ಪಡೆದ ಸಾಹಿತಿಗಳಾದ ಸಾ.ಶಿ.ಮರುಳಯ್ಯ, ವಿಜ್ಞಾನಿ ಶಿವಪ್ಪ ಎಸ್.ಕೆರೆ, ಶಿಕ್ಷಣ ತಜ್ಞ ರಾದ ಜೆ.ಆರ್. ಮಹಾಲಿಂಗಯ್ಯ, ಕೈಗಾರಿಕೋ ದ್ಯಮಿ ಎಸ್.ಎಸ್.ರುದ್ರಯ್ಯ, ಹಂಪಿಯ ಸದಾಶಿವಯೋಗಿ, ಡಾ||ಶಂಭುಲಿ0ಗಯ್ಯ ಮುಂತಾದ ದೇಶ ವಿದೇಶಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹನೀಯ ರನ್ನು ಸ್ಮರಿಸಿದರು.

ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕರಾದ ಎಸ್. ಚನ್ನಬಸವಯ್ಯ ಮಾತನಾಡಿ ತಮ್ಮ ಬಾಲ್ಯದಲ್ಲಿ ಮಾತೃಹೃದಯಿಗಳಾದ ಲಿಂಗೈಕ್ಯ ಪೂಜ್ಯರು ಸುಮಾರು ೩೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನ್ನಾಶ್ರಯ, ಸಂಸ್ಕಾರ ನೀಡಲು ಪಟ್ಟ ಶ್ರಮದ ಬಗ್ಗೆ ಹಾಗೂ ಪ್ರಸ್ತತ ಪೂಜ್ಯರು ಪೀಠಾರೋಹಣವಾದಾಗಿನಿಂದ ತಿಪಟೂರಿನ ಸಮಾಜದಲ್ಲಿ ಸದ್ದುಗದ್ದಲವಿಲ್ಲದೆ ಆಗಿರುವ ಸರ್ವತೋ ಮುಖ ಏಳಿಗೆ ಹಾಗೂ ಪರಿವರ್ತನೆಗಳ ಬಗ್ಗೆ ಮಾತನಾಡಿ ಈ ಈರ್ವರು ಶ್ರೀಗಳಿಗೂ ಕೃತಜ್ಞತೆ ಹಾಗೂ ಗೌರವ ಸಲ್ಲಿಸುವ ಸಲುವಾಗಿ ಒಂದು ಅರ್ಥಗರ್ಭಿತ ಕಾರ್ಯಕ್ರಮವನ್ನು ಇದೇ ತಿಂಗಳ ಭಾನುವಾರ ೨೭ ರಂದು ಆಯೋಜಿಸಿರುವ ರೂಪುರೇಷಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಶ್ರೀ ಶಂಕರಲಿ0ಗಪ್ಪ, ಮಾಕಳ್ಳಿ ದಕ್ಷಿಣಾಮೂರ್ತಿ, ಈಡೇನಹಳ್ಳಿ ಸಿದ್ಧರಾಮಯ್ಯ, ವಕೀಲರಾದ ಜಯಣ್ಣ, ಅಗ್ರೊಪ್ಲಾಸ್ಟ್ ಆರ್.ವಿವೇಕಾನಂದ್, ರೇಣುಕಾರಾಧ್ಯ, ಸಿಡ್ಲೇಹಳ್ಳಿ ಹೇಮಂತ್, ಮಹೇಶ್, ತ್ಯಾಗಟೂರು ಕುಮಾರಸ್ವಾಮಿ, ಬಿಳಿಗೆರೆ ಹೊನ್ನಪ್ಪ, ಜಕ್ಕನಹಳ್ಳಿ ಚನ್ನಬಸವಣ್ಣ, ಕೊಬ್ಬರಿ ವರ್ತಕರಾದ ಬಸವರಾಜು, ರಾಜಶೇಖರ್ ಮುಂತಾದ ಗಣ್ಯರು ಹಾಗೂ ವಿವಿಧ ಗ್ರಾಮಗಳ ಗುಡಿಗೌಡರು, ಪಟೇಲರು, ಹಿರಿಯ ವಿದ್ಯಾರ್ಥಿಗಳು, ಮುಖಂಡರು ಸದ್ಭಕ್ತರು ಭಾಗವಹಿಸಿದ್ದರು.