ತುಮಕೂರು: ತುಮಕೂರು ಹಾಲು ಒಕ್ಕೂಟದ ವತಿಯಿಂದ ವಿಶ್ವ ಹಾಲು ದಿನಾಚರಣೆಯ ದಿನವಾದ ಇಂದು ಜಿಲ್ಲಾಸ್ಪತ್ರೆ ರೋಗಿಗಳಿಗೆ ಹಾಲು ವಿತರಿಸುವ ಜತೆಗೆ ಹಾಲಿನ ಮಹತ್ವವನ್ನು ಸಾರುವಂತಹ ಕೆಲಸ ಮಾಡಲಾಗು ತ್ತಿದೆ. ಅಪೌಷ್ಠಿಕ ಮಕ್ಕಳಿಗೆ ಹಾಲು ವಿತರಿಸುವ ಕೆಲಸದೊಂದಿಗೆ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ತುಮುಲ್ ಮಾಡುತ್ತಿದೆ ಎಂದು ಜಿಪಂ ಸಿಇಒ ಡಾ: ಕೆ. ವಿದ್ಯಾಕುಮಾರಿ ತಿಳಿಸಿದರು.
ವಿಶ್ವ ಹಾಲು ದಿನಾಚರಣೆ ಅಂಗವಾಗಿ ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ವತಿಯಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ನಂದಿನಿಯ ಸುಹಾಸಿತ, ತೃಪ್ತಿ ಹಾಲು, ಕುಕ್ಕೀಸ್ ಬಿಸ್ಕೆಟ್ ವಿತರಿಸಿ ಮಾತನಾಡಿ, ರೋಗಿಗಳಿಗೆ ಹಾಲನ್ನು ನೀಡುವುದರ ಮೂಲಕ ಅದರ ಮಹತ್ವವನ್ನು ಸಹ ತಿಳಿಸಿದ್ದಾರೆ. ಕೆಎಂಎಫ್ ಮಂಡಳಿಯು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಯತ್ತಾ ಸಾಗುವ ನಿಟ್ಟಿನಲ್ಲಿ ಅಧ್ಯಕ್ಷರು ಹಾಗೂ ನಿರ್ದೇಶಕರು ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ದೇಶದಲ್ಲೇ ಹೈನುಗಾರಿಕೆಯಲ್ಲಿ ಗುಜರಾತ್ ಹೊರತುಪಡಿಸಿದರೆ ಕರ್ನಾಟಕ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 15 ಹಾಲು ಒಕ್ಕೂಟಗಳು ಕಾರ್ಯ ನಿರ್ವಹಿಸುತ್ತಿವೆ. ತುಮಕೂರು ಹಾಲು ಒಕ್ಕೂಟ ರಾಜ್ಯದ ಒಕ್ಕೂಟಗಳಲ್ಲೇ ಪ್ರತಿಷ್ಠಿತ ಒಕ್ಕೂಟವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.
ಜಿಲ್ಲೆಯಲ್ಲಿ 1338 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 8.50 ಲಕ್ಷ ಲೀಟರ್ ಹಾಲು ಪ್ರತಿನಿತ್ಯ ಶೇಖರಣೆ ಯಾಗುತ್ತಿದೆ. ರೈತರಿಂದ ಶೇಖರಿಸಿದ ಹಾಲನ್ನು ಸಂಸ್ಕರಣೆ ಮಾಡಿ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡಿ ಅದರಿಂದ ಬಂದಂತಹ ಹಣದಲ್ಲಿ ರೈತರಿಗೆ ಬಟವಾಡಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ವೀಣಾ, ತುಮುಲ್ ನಿರ್ದೇಶಕ ರೇಣುಕಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಸಿ. ಸುರೇಶ್, ವ್ಯವಸ್ಥಾಪಕರಾದ (ಮಾರುಕಟ್ಟೆ) ಹೆಚ್.ಎಂ. ವಿದ್ಯಾನಂದ್, ಕೆ.ಎಂ. ಗಿರೀಶ್, ಉಪ ವ್ಯವಸ್ಥಾಪಕರಾದ ಟಿ.ಕೆ. ರವಿಕಿರಣ್, ಸಹಾಯಕ ವ್ಯವಸ್ಥಾಪಕಿ ಎಂ. ಶಿಲ್ಪ, ಸಹಾಯಕ ವ್ಯವಸ್ಥಾಪಕರಾದ ನರಸಿಂಹೇಗೌಡ, ಭರತ್, ಕೆ.ಎಲ್. ದೇವರಾಜು, ಹೆಚ್.ಎಂ. ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.