ಕಲಬುರ್ಗಿ: ಗಣಿಗಾರಿಕೆ ಉದ್ಯಮಿಗಳ ಮತ್ತು ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ, ರಾಜ್ಯದ ಐದು ಕಡೆ ‘ಗಣಿ ಅದಾಲತ್’ ನಡೆಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ಆರ್.ನಿರಾಣಿ ಹೇಳಿದರು.
‘ಏ.30ರಂದು ಬೆಂಗಳೂರಿನ ಅರಮನೆ ಮೈದಾನ, ಮೇ 15ರಂದು ಮೈಸೂರು, ಮೇ 29ಕ್ಕೆ ಬೆಳಗಾವಿ, ಜೂನ್ 11ಕ್ಕೆ ಕಲಬುರ್ಗಿ ಹಾಗೂ ಜೂನ್ 25ಕ್ಕೆ ಮಂಗಳೂರಿನಲ್ಲಿ ಈ ಅದಾಲತ್ ನಡೆಯಲಿದೆ’. ಗಣಿಗಾರಿಕೆಗೆ ಅನುಮತಿ ನೀಡಲು ಉದ್ಯಮಿಗಳಿಗೆ ಅಲೆದಾಟ ತಪ್ಪಿಸಲು ಮುಂದಿನ ತಿಂಗಳಿನಿಂದ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಿದರು.
ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ಕಲ್ಲು ಕ್ವಾರಿಯಲ್ಲಿ ಸಿಡಿಮದ್ದಿನಿಂದ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ, ರಾಜ್ಯ ದಾದ್ಯಂತ ಗಣಿಗಾರಿಕೆಗೆ ಸಿಡಿಮದ್ದು ಬಳಕೆ, ಸಾಗಣೆ ಹಾಗೂ ಸಂಗ್ರಹ ಕುರಿತು ಕ್ವಾರಿ ಮಾಲೀಕರಿಗೆ ಮತ್ತು ಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಾಗಾರ ನಡೆಸಲಾಗುತ್ತಿದೆ. ಡೈರೆಕ್ಟರ್ ಜನರಲ್ ಆಫ್ ಮೈನಿಂಗ್ ಸೆಕ್ಯುರಿಟಿ (ಡಿ.ಜಿ.ಎಂ.ಎಸ್.) ಅನುಮತಿ ಇಲ್ಲದೆ ನಡೆಸುತ್ತಿರುವ 2,500 ಗಣಿಗಾರಿಕೆಗಳಿವೆ ಎಂದರು.
‘ರಾಜ್ಯದಲ್ಲಿ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಏಪ್ರಿಲ್ ಅಂತ್ಯಕ್ಕೆ ಹೊಸ ಗಣಿ ನೀತಿ ಜಾರಿಗೆ ತರಲಾಗುತ್ತಿದೆ’ ಎಂದು ಸಚಿವ ನಿರಾಣಿ ತಿಳಿದರು. ’10 ಟ್ರಿಪ್ ತೆಗೆಯಲು ಮರಳು ತೆಗೆಯಲು ಅನುಮತಿ ಪಡೆದು 90 ಟ್ರಿಪ್‌ನಷ್ಟು ತೆಗೆಯುತ್ತಿದ್ದಾರೆ. ಅಧಿಕಾರಿಗಳು ಭಾಗಿದಾರರಾದ ಕಾರಣವೇ ಈ ರೀತಿ ಅಕ್ರಮ ನಡೆಯಲು ಸಾಧ್ಯವಾಗಿದೆ’ ಎಂದು ಸ್ಪಷ್ಟಪಡಿಸಿದರು.
‘ಆಡಳಿತ ಸುಧಾರಣೆ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಗರಿಷ್ಠ ₹ 2 ಕೋಟಿ ವೆಚ್ಚದಲ್ಲಿ ಖನಿಜ ಭವನ ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ