ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಡೋಲು ಬಡಿದು, ಕಂಸಾಳೆ ಬಾರಿಸಿ, ಕಲಾವಿದರೊಂದಿಗೆ ವೀರಗಾಸೆ ಕುಣಿತ ಮಾಡಿದರು. ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ಬರಮಾಡಿಕೊಳ್ಳುವ ಸಂದರ್ಭ ಈ ಗಳಿಗೆ ಕೂಡಿ ಬಂತು.
ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ನೆರೆದಿದ್ದ ಕಲಾತಂಡಗಳ ಜೊತೆ ಕಲಾವಿದ ರಂತೆಯೇ ಡೋಲು ಬಾರಿಸಿದರು. ವೀರಗಾಸೆ ಕುಣಿತ ಮಾಡುವ ಕಲಾವಿದರನ್ನು ಹುರಿದುಂಬಿಸುವುದರ ಜೊತೆಗೆ ತಮ್ಮಲ್ಲಿನ ಜಾನಪದ ಕಲೆಯನ್ನು ಕೂಡ ಪ್ರದರ್ಶಿಸಿದರು. ಪೂಜಾ ಕುಣಿತ, ಗೊಂಬೆ ಕುಣಿತ ನೋಡಿದ ಸಚಿವರು ಅವ ರೊಂದಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಸಚಿವರ ಕುಣಿತ, ಡೋಲು ಬಡಿತವನ್ನು ಕಂಡ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಕೂಡ ತಮಟೆ ಬಾರಿಸಿದರು.
ಸಚಿವರೊಂದಿಗೆ ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಗಳ ಅಧ್ಯಕ್ಷ ಅಪ್ಪಣ್ಣ ಸೇರಿದಂತೆ ಹಲವು ಮುಖಂಡರು ಹೆಜ್ಜೆ ಹಾಕಿದರು. ಇದೇ ವೇಳೆ ಗ್ರಾಮೀಣ ಕಲಾ ತಂಡಗಳನ್ನು ವೀಕ್ಷಿಸಿ, ಅವರ ಕಲೆಯನ್ನು ಪ್ರೋತ್ಸಾಹಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, “ಕಲಾವಿದರಿಗೆ ಪ್ರೋತ್ಸಾಹ ನೀಡ ಬೇಕೆಂದು ಕರೆತರಲಾಗಿದೆ. ಅವರೊಂದಿಗೆ ಹೆಜ್ಜೆ ಹಾಕಲು ಸಾಧ್ಯವಿಲ್ಲ, ಆದರೆ ಅವರನ್ನು ಪ್ರೋತ್ಸಾಹಿಸಿ ಹುರಿದುಂಬಿಸಲು ಕುಣಿತ ಮಾಡಲಾಯಿತು,” ಎಂದರು.
“ಚಿನ್ನದ ಅಂಬಾರಿಯಲ್ಲಿ ಮೆರವಣಿಗೆಯಲ್ಲಿ ಸಾಗುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಆಟೋ, ಮೊಬೈಲ್ ವ್ಯಾನ್‌ನಲ್ಲಿ ಕರೆತರ ಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಉತ್ಸವ ಮೂರ್ತಿಯನ್ನು ಅರಮನೆಗೆ ಮೆರವಣಿಗೆಯಲ್ಲಿ ಕರೆ ತರುತ್ತಿರುವುದು,” ಎಂದು ಹೇಳಿದರು.