Tuesday, 17th September 2024

ಮಕ್ಕಳಿಗೆ ವಿದ್ಯಾಲಯ ದೇವಾಲಯವಿದ್ದಂತೆ: ಶರತ್‌ ಬಚ್ಚೇಗೌಡ

ಹೊಸಕೋಟೆ: ಮಕ್ಕಳ ಜೀವನವನ್ನು ರೂಪಿಸುವಲ್ಲಿ ವಿದ್ಯಾಲಯಗಳು ಮಹತ್ತರ ಪಾತ್ರವಹಿಸುತ್ತವೆ. ಮಕ್ಕಳ ನಿಜವಾದ ಭವಿಷ್ಯ ರೂಪಿತವಾಗುವುದು ಶಿಕ್ಷಣ ಸಂಸ್ಥೆಗಳಿಂದ. ಮನೆಯಲ್ಲಿ ಪಾಲಕರು ಮಕ್ಕಳ ಭವಿಷ್ಯದ ಗುರಿಯನ್ನು ಹೊಂದಿರುತ್ತಾರೆ. ಅದನ್ನು ಸಾಕಾರಗೊಳಿಸುವ ಸಾಮರ್ಥ್ಯ ಇರುವುದು ವಿದ್ಯಾಲಯಗಳಿಗೆ ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು.
ಯುನೈಟೆಡ್‌ ವೇ ಮತ್ತು ನೆಕ್ಸ್ಟ್‌ ಜೆನ್‌ ಸಂಸ್ಥೆಗಳು ನಂದಗುಡಿಯಲ್ಲಿರುವ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಹಾಗೂ ಸರ್ಕಾರಿ ಪದವಿ ಕಾಲೇಜಿನ ಪ್ರಯೋಗಾಲಯಗಳಿಗೆ ಸಿಎಸ್‌ಆರ್‌ ಫಂಡ್‌ ನೀಡಿದ್ದು, ಈ ಅನುದಾನದ ಅಡಿಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಕಂಪ್ಯೂಟರ್‌ ಪ್ರಯೋಗಾಲಯಗಳು ಹಾಗೂ ಡಿಜಿಟಲ್‌ ಶಾಲಾ ಕೊಠಡಿಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಮಕ್ಕಳಿಗೆ ವಿದ್ಯಾಲಯ ದೇವಾಲಯವಿದ್ದಂತೆ. ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಬಂದರೆ ಸಾವಿರಾರು ಮಕ್ಕಳ ಭವಿಷ್ಯಕ್ಕೆ ಅಡಿಪಾಯ ಹಾಕಿದಂತಾಗುತ್ತದೆ. ಮುಂದುವರೆಯುತ್ತಿರುವ ಇಂದಿನ ಸಮಾಜದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡುವುದು ಉತ್ತಮ ಎಂದರು.
ಶಿಕ್ಷಣ ಸಂಸ್ಥೆಗಳು ಅದೆಷ್ಟೇ ಶ್ರಮವಹಿಸಿ ಮಕ್ಕಳ ಜೀವನವನ್ನು ರೂಪಿಸುವುದಕ್ಕೆ ಪ್ರಯತ್ನ ಪಟ್ಟರೂ ಪಾಲಕರೂ ತಮ್ಮ ಮಕ್ಕಳ ಕುರಿತಾಗಿ ಹೆಚ್ಚಿನ ಗಮನವಹಿಸುವ ಅಗತ್ಯವಿದೆ. ಸಿಎಸ್‌ಆರ್‌ ಫಂಡ್‌ಗಳು ಇಂತಹ ಶಿಕ್ಷಣ ಸಂಸ್ಥೆಗಳಿಗೆ ಲಭಿಸುವುದರಿಂದ ಶಿಕ್ಷಣ ಸಂಸ್ಥೆಗಳು ತಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುನೈಟೆಡ್‌ ವೇ ಕಂಪನಿಯ ವ್ಯವಸ್ಥಾಪಕ ವೆಂಕಟ ಸುಧಾಕರ್‌, ನಾವು ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ಕಾಣಬೇಕೆಂದರೆ, ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣದ ಅವಶ್ಯಕತೆ ಇದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *