Friday, 13th December 2024

ರಾಜ್ಯಪಾಲರ ಹೇಳಿಕೆಗಳು ಸತ್ಯಕ್ಕೆ ಹತ್ತಿರವಾಗಿಲ್ಲ: ಶಾಸಕ ಶರತ್ ಬಚ್ಚೇಗೌಡ

ಬೆಂಗಳೂರು: ಮುಖ್ಯಮಂತ್ರಿಗಳ ಮೇಲಿನ ಆರೋಪದಲ್ಲಿ ಯಾವುದೇ ಸತ್ಯವಿಲ್ಲ. ಬೊಮ್ಮಯಿಯವರ ಬಿಜೆಪಿ ಸರಕಾರದಲ್ಲಿ ಪಿಎಸ್‌ಐ ಹಗರಣ ವಾದಾಗ ಅವರೇ ಸಮಿತಿಯನ್ನು ರಚಿಸಿದ್ದರು. ಗಂಗಾ ಕಲ್ಯಾಣ ಹಗರಣದಲ್ಲಿಯೂ ಅವರೇ ಸಮಿತಿಯನ್ನು ರಚಿಸಿದ್ದರು. ಬಿಟ್ ಕಾಯಿನ್ ಹಗರಣದಲ್ಲಿಯೂ ಅವರೇ ಸಮಿತಿ ರಚನೆ ಮಾಡಿದ್ದರು. ಕೇವಲ ಸಮಿತಿಯನ್ನು ರಚನೆ ಮಾಡುವುದರಿಂದ ಅವರೊಬ್ಬ ಅಪರಾಧಿ ಅಥವಾ ಆರೋಪಿ ಎಂದು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ರಾಜ್ಯಪಾಲರು ನೀಡುತ್ತಿರುವ ಹೇಳಿಕೆಗಳು ಯಾವುದೇ ಬುನಾದಿಯನ್ನು ಹೊಂದಿಲ್ಲ ಎಂದು ಹೊಸಕೋಟೆಯ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ‌್ ನಲ್ಲಿಯೂ ಇಂತಹಾ ಆರೋಪಗಳಾದಾಗ ಅಧಿಕಾರ ದಲ್ಲಿರುವವರೇ ಸಮಿತಿ ರಚನೆ ಮಾಡಿ ಅವರನ್ನು ನಿರಪರಾಧಿ ಎಂದು ಪರಿಗಣಿಸಿದ ಘಟನೆಗಳನ್ನೂ ನೋಡಿದ್ದೇವೆ. ಮುಖ್ಯಮಂತ್ರಿಗಳ ಮೇಲಿನ ಈ ಆರೋಪದಲ್ಲಿ ಎಲ್ಲಾ ಪುರಾವೆಗಳೂ ಇವೆ ಎಂದು ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ಆದರೆ ಪುರಾವೆಯನ್ನು ಯಾರು ನೀಡಿದ್ದಾರೆ ಎನ್ನುವ ಮಾಹಿತಿ ಈ ಆದೇಶದಲ್ಲಿ ಸ್ಪಷ್ಟವಾಗಿಲ್ಲ ಎಂದು ಹೇಳಿದರು.

ಇದೊಂದು ತರಾತುರಿಯಲ್ಲಿ ಹೊರಡಿಸಿರುವ ಆದೇಶವಾಗಿದೆ ಮತ್ತು ದುರುದ್ದೇಶಪೂರಿತವಾಗಿದೆ. ಮುಡಾ ಹಗರಣದಲ್ಲಿ ಕೇವಲ ಮುಖ್ಯಮಂತ್ರಿಗಳ ಮೇಲೆ ಮಾತ್ರವೇ ನೇರವಾಗಿ ಆಪಾದನೆ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಹೇಳಿದರು.

ದೂರು ನೀಡಿರುವ ಯಾವುದೇ ಸಂಸ್ಥೆಯೂ ಅಧಿಕಾರದ ದುರ್ಬಳಕೆ ಆಗಿದೆ ಎನ್ನುವುದನ್ನು ಉಲ್ಲೇಖ ಮಾಡಿಲ್ಲ. ಈಗ ರಾಜ್ಯಪಾಲರು ಇಂತಹ ಆದೇಶ ಗಳನ್ನು ಹೊರಡಿಸುತ್ತಾರೆಂದರೆ ಪ್ರಜಾಪ್ರಭುತ್ವ ಏನಾಗುತ್ತಿದೆ ಎಂದು ಪ್ರಶ್ನೆ ಮಾಡಿದರು. ರಾಜ್ಯಪಾಲರು ಕೇಂದ್ರ ಸರಕಾರದ ಗೊಂಬೆಯಾದಂತೆ ಅನಿಸುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ಇದನ್ನು ಖಂಡಿಸುತ್ತೇವೆ. ರಾಜ್ಯದಲ್ಲಿರುವ 136 ಕಾಂಗ್ರೆಸ್ ಶಾಸಕರು, ಎಲ್ಲಾ ಕಾರ್ಯಕರ್ತರೂ ಮುಖ್ಯಮಂತ್ರಿಗಳಿಗೆ ಜೊತೆಯಾಗಿ ನಿಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ರಾಜ್ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ನಾವು ಅನಾವಶ್ಯಕವಾಗಿ ರಾಜ್ಯಪಾಲರನ್ನು ದೂಷಿಸುತ್ತಿಲ್ಲ.ಕಳೆದ ಹತ್ತು ವರ್ಷಗಳಲ್ಲಿ ಎಲ್ಲೆಲ್ಲಿ ಕೇಂದ್ರ ಸರಕಾರದ ಆಟಗಳು ನಡೆಯುತ್ತಿಲ್ಲವೋ ಅವರು ಸಿಬಿಐ, ಐಟಿ, ಎಡಿ ಮತ್ತು ಈಗ ರಾಜ್ಯ ಪಾಲರನ್ನೂ ಉಪಯೋಗಿಸಿಕೊಂಡು ಪಕ್ಷ ಕಟ್ಟುವ ಕಾರ್ಯವನ್ನು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಮತ್ತು ರಾಜ್ಯಪಾಲರ ಕಚೇರಿಯನ್ನು ರಾಜಕೀಯ ಅಸ್ತ್ರವನ್ನಾಗಿಸಿಕೊಂಡಿದೆ ಎಂದು ಆರೋಪ ಮಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.