Friday, 13th December 2024

ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಈಗಿಂದಲೇ ಸಜ್ಜಾಗಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ(ಗ್ರಾ) ಜಿಲ್ಲಾ ಮಟ್ಟದ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಪ್ರ-ಶಿಕ್ಷಣ ವರ್ಗ

ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತಕ್ಕೆ ವಿಶ್ವಮಾನ್ಯತೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಬರಲಿರುವ ಎಪ್ರೀಲ್-ಮೇ ತಿಂಗಳಲ್ಲಿ ಜರುಗಲಿರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಭಾರತದ ಪ್ರಧಾನಿಯಾಗಲು ಕಾರ್ಯಕರ್ತರು ಈಗಿನಿಂದಲೇ ಚುನಾವಣೆಯ ಸಿದ್ಧತೆಯಲ್ಲಿ ತೊಡಗಬೇಕು. ಈ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ಶಾಸಕ, ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಸೋಮವಾರ ತಾಲೂಕಿನ ಅರಭಾವಿ ವ್ಯಾಪ್ತಿಯ ಗೋಕಾಕ ಸಪ್ಲಾಯರ್ಸ್ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಜರುಗಿದ ಜಿಲ್ಲಾ ಮಟ್ಟದ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರ ಪ್ರ-ಶಿಕ್ಷಣ ವರ್ಗದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ದಿಂದಾಗಿ ಇಡೀ ವಿಶ್ವ ಮಟ್ಟದಲ್ಲಿ ಭಾರತಕ್ಕೆ ಜನಮನ್ನಣೆ ದೊರೆತಿದೆ ಎಂದು ಪ್ರಧಾನಿಗಳ ಕಾರ್ಯಗಳನ್ನು ಶ್ಲಾಘಿಸಿದರು.

ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೇಂದ್ರದ ಹಾಗೂ ರಾಜ್ಯದಲ್ಲಿ ನಮ್ಮ ಹಿಂದಿನ ಸರ್ಕಾರದ ಸಾಧನೆಗಳನ್ನು ಕಾರ್ಯಕರ್ತರು ಮತದಾರರ ಮನೆ ಮನೆಗೆ ತಲುಪಿಸುವ ಕಾರ್ಯಗಳನ್ನು ಕೈಗೊಳ್ಳಬೇಕು. ಬರುವ ತಾಪಂ ಹಾಗೂ ಜಿಪಂ ಚುನಾವಣೆ ಗಳಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿಗಳು ಜಯಗಳಿಸಲು ಕಾರ್ಯಕರ್ತರು ದುಡಿಯಬೇಕು ಎಂದು ಹೇಳಿದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರರು ನೀಡಿರುವ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿತ್ತು. ಆದರೆ ಮತದಾರರು ನಮ್ಮ ಬದಲಾಗಿ ಬೇರೊಂದು ಪಕ್ಷವನ್ನು ಅಧಿಕಾರಕ್ಕೆ ತಂದರು. ನಮ್ಮ ಸರ್ಕಾರ ವಿದ್ದಾಗ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿತ್ತು. ಆದರೀಗ ಕಾಂಗ್ರೇಸ್ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ಭಾರತೀಯನ ಕನಸಾಗಿರುವ ಅಯೋಧ್ಯೆಯ ರಾಮ ಮಂದಿರವು ಬರುವ ಜನೇವರಿ 22 ರಂದು ಲೋಕಾರ್ಪಣೆಗೊಳ್ಳಲಿದೆ. ಈ ಮೂಲಕ ನಾವು ಜನತೆಗೆ ನೀಡಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸುತ್ತಿದ್ದೇವೆ. ಪ್ರಧಾನಿಗಳ ದೂರದೃಷ್ಟಿಯ ನಾಯಕತ್ವದಿಂದ ನಮ್ಮ ದೇಶವು ವಿಶ್ವಮಾನ್ಯ ವಾಗಿ ಬೆಳೆಯುತ್ತಿದೆ. ಜೊತೆಗೆ ನರೇಂದ್ರ ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕೆಂಬುದು ಕೋಟ್ಯಾಂತರ ಜನರ ಆಶಯವಾಗಿದೆ ಎಂದು ತಿಳಿಸಿದರು.

ಬಿಜೆಪಿಯು ಅತೀ ಶಿಸ್ತಿನ ಹಾಗೂ ಸಂಘಟನಾತ್ಮಕ ಗುಣಗಳನ್ನು ಮೈಗೂಡಿಸಿಕೊಂಡಿರುವ ವಿಶ್ವದ ಅತೀ ದೊಡ್ಡ ಪಕ್ಷವಾಗಿದೆ. ನಮ್ಮ ಪಕ್ಷದಲ್ಲಿ ಕಾರ್ಯಕರ್ತರಿಗಿರುವ ಮನ್ನಣೆ ಯಾವ ಪಕ್ಷದಲ್ಲಿಯೂ ಇಲ್ಲ. ಹೀಗಾಗಿ ಕಾರ್ಯಕರ್ತರಿಗೆ ಸಕಲ ಗೌರವ ನೀಡುತ್ತಿರುವ ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕು. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಜನರ ಕಲ್ಯಾಣಕ್ಕಾಗಿ ಮೋದಿಯವರು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯ ಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ರಾಜ್ಯ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕ ಹಾಗೂ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ವಿಭಾಗ ಸಹ-ಸಂಘಟನಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಗೋಕಾಕ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಸ್ವಾಗತಿಸಿದರು. ರಾಜ್ಯ ಪ್ರಶಿಕ್ಷಣ ಪ್ರಕೋಷ್ಠದ ಸದಸ್ಯ ಶಶಿಕಾಂತ ವಿಶ್ವಬ್ರಾಹ್ಮಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್. ಸಿದ್ದನಗೌಡ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳ ಸದಸ್ಯರುಗಳು ಪ್ರಶಿಕ್ಷಣ ವರ್ಗದಲ್ಲಿ ಭಾಗಿಯಾಗಿದ್ದರು.

ಅವಧಿ 1 ರಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು ಪಕ್ಷದ ಇತಿಹಾಸ, ಸಿದ್ಧಾಂತ ಮತ್ತು ಸಮನ್ವಯದ ಬಗ್ಗೆ ಮಾತನಾಡಿದರು. ಅವಧಿ 2 ರಲ್ಲಿ ಮಾಜಿ ಶಾಸಕ ಪಿ. ರಾಜೀವ ಕೇಂದ್ರ ಸರ್ಕಾರದ ಅಂತ್ಯೋದಯ ಯೋಜನೆಗಳು ಮತ್ತು ಅನುಷ್ಠಾನ ಹಾಗೂ ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ಮಾತನಾಡಿದರು. ಅವಧಿ 3 ರಲ್ಲಿ ಸಾಮಾಜಿಕ ಜಾಲತಾಣದ ರಾಜ್ಯ ಸಹ ಸಂಚಾಲಕ ಪ್ರಶಾಂತ ಜಾಧವ ಅವರು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮ ನಿರ್ವಹಣೆ, ಅವಧಿ 4 ರಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಅವರು ಸಾಮಾನ್ಯ ಶಿಷ್ಠಾಚಾರ ಹಾಗೂ ಕುಶಲ ಜನಪ್ರತಿನಿಧಿಗಳ ಬಗ್ಗೆ ಮಾತನಾಡಿದರು.