– ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಅನಂತಪದ್ಮನಾಭ
– 15 ದಿನಗಳ ಕಾಲ ವಿವಿಧ ಸೇವಾ ಚಟುವಟಿಕೆ ಆಯೋಜನೆ
ವಿಜಯನಗರ (ಹೊಸಪೇಟೆ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಸೆ. 17ರಂದು ಇದ್ದು, ಬಿಜೆಪಿ ವತಿಯಿಂದ ಜಿಲ್ಲೆಯಲ್ಲಿ ಸೇವಾ ಪಾಕ್ಷಿಕ ಎಂಬ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಅನಂತಪದ್ಮನಾಭ ಅವರು ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸೂಚನೆ ಯ ಮೇರೆಗೆ ಈ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಬಡವರ, ಕಾರ್ಮಿಕರ, ರೈತರ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದ ಮೋದಿ ಅವರು ದೀರ್ಘಾಯುಷ್ಯಕ್ಕಾಗಿ ಈ ಬಾರಿ ಸೇವಾ ಪಾಕ್ಷಕಿ ಹಮ್ಮಿಕೊಳ್ಳಲಾಗಿದೆ. 8 ವರ್ಷಗಳ ಕಾಲ ದೇಶದ ಅತ್ಯುತ್ತಮ ಪ್ರಧಾನಿಯಾಗಿ ಹಾಗೂ 12 ವರ್ಷಗಳ ಕಾಲ ಗುಜರಾತ್ ಸಿಎಂ ಆಗಿ ಅವರು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಈ ಬಾರಿ ಅವರ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ದೇಶಾದ್ಯಂತ ಬಿಜೆಪಿ ವತಿಯಿಂದ ವಿವಿಧ ಸೇವಾ ಚಟುವಟಿಕೆ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸೆ. 17ರಿಂದ ಆರಂಭವಾಗುವ ಸೇವಾ ಚಟುವಟಿಕೆಗಳು ಅ. 2ರ ಗಾಂಧೀಜಿ ಮತ್ತು ಲಾಲ ಬಹಾದ್ದೂರ ಶಾಸ್ತ್ರಿಜಿ ಅವರ ಜಯಂತಿವರೆಗೆ ನಡೆಯಲಿವೆ. ಸೆ. 25ರಂದು ಬಿಜೆಪಿ ಸಂಸ್ಥಾಪಕರಾದ ಪಂಡಿತ್ ದೀನ ದಯಾಳ ಉಪಾಧ್ಯಾಯರ ಜಯಂತಿ ಸಹ ಇದೆ. ಈ ವೇಳೆ ಬಿಜೆಪಿ ಕಾರ್ಯಕರ್ತರಿಂದ ರಕ್ತದಾನ ಶಿಬಿರಗಳು ನಡೆಯಲಿವೆ. ಇದಲ್ಲದೆ ದಿವ್ಯಾಂಗರಿಗೆ ಕೃತಕ ಅಂಗಾಂಗ ಜೋಡೆಣೆ ಶಿಬಿರ ಇರಲಿದೆ. ಸೆ. 18ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು, ಸ್ವಚ್ಛತಾ ದಿನ ಸಹ ಹಮ್ಮಿಕೊಳ್ಳಲಾಗಿದೆ.
ಅಜಾದಿ ಕಾ ಅ.ಋತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳ ನಿರ್ಮಾಣಕ್ಕೆ ನಿರ್ದೇಶನ ನೀಡಿದೆ. ಕೆಲ ಜಿಲ್ಲೆಗಳಲ್ಲಿ ಅಮೃತ ಸರೋವರ ಕೆರೆಗಳ ನಿರ್ಮಾಣವಾಗಿದೆ. ಈ ಸಮಯದಲ್ಲಿ ನಮ್ಮ ಕಾರ್ಯಕರ್ತರು ನದಿ, ಕೆರೆ, ಹಳ್ಳ, ಬಾವಿಗಳನ್ನೂ ಸೇರಿ ನೀರಿನ ಮೂಲಗಳ ಸ್ಥಳಗಳಲ್ಲಿ ಸ್ವಚ್ಚತಾ ಅಭಿಯಾನ, ಸಸಿ ನೆಡಲಿದ್ದೇವೆ. ಅದರಂತೆ 2025ರ ವೇಳೆಗೆ ಭಾರತವು ಕ್ಷಯರೋಗ ಮುಕ್ತವಾಗಬೇಕೆಂಬ ಪ್ರಧಾನಿ ಮೋದಿಯವರ ಸಂಕಲ್ಪವಾಗಿದೆ. ಈ ನಿಟ್ಟನಲ್ಲಿ ಕಾರ್ಯಕರ್ತರು, ಜನಪ್ರತಿನಿಧಿಗಳು, ಪದಾಧಿಕಾರಿಗಳು 5 ಜನ ರೋಗಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ, ಚಿಕಿತ್ಸೆ ಕೊಡಿಸಿ, ಮಾರ್ಗದರ್ಶನ ಮಾಡಿ ಪೂರಕ ಬೆಂಬಲ ಕೊಡಲಿದ್ದೇವೆ. ಪ್ರಧಾನಿ ಅವರು ಕೈಗೊಂಡ ಜನ ಕಲ್ಯಾಣ ಯೋಜನೆಗಳ ಕುರಿತ ಪುಸ್ತಕ ಪ್ರದರ್ಶನ, ಮೋದಿ ಅವರ ಜೀವನ ಮತ್ತು ಗುರಿ ಕುರಿತಾದ ಪ್ರದರ್ಶನ ಇರಲಿದೆ ಎಂದು ವಿವರಿಸಿದರು.
ಸೆ. 25ರಂದು ದೀನದಯಾಳ ಉಪಾಧ್ಯಾಯರ ಜಯಂತಿ ದಿನ ಅವರ ಜೀವನ ಕುರಿತು ಚರ್ಚೆ, ಸಂವಾದ ಕಾರ್ಯಕ್ರಮ ಇರಲಿದೆ. ಸೆ. 25ರಂದು ನಡೆಯುವ ಪ್ರಧಾನಿಯವರ ಮನ್ ಕಿ ಬಾತ್ ನ್ನು ಅಂದು ಬೂತ್ ಮಟ್ಟದಲ್ಲಿ ಸಾಮೂಹಿಕವಾಗಿ ಆಲಿಸುವ ವ್ಯವಸ್ಥೆ ಮಾಡಲಾಗಿದೆ. ಇನ್ನು ಅ. 2ರಂದು ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಸ್ವದೇಶಿ, ಖಾದಿ, ಸ್ವಚ್ಛತೆ, ಆತ್ಮನಿರ್ಭರತೆ ಹಾಗೂ ಶುಚಿತ್ವದ ಕುರಿತು ಅಭಿಯಾನ ಇರಲಿದೆ ಎಂದರು.
ಮೋದಿ ಕೊಡುಗೆ: ಮೋದಿಯವರು ದೇಶದ ಪ್ರಧಾನಿ ಆದ ನಂತರ ಕರ್ನಾಟಕಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಕಳೆದ 8 ವರ್ಷಗಳಲ್ಲಿ ರಾಜ್ಯಕ್ಕೆ ಒಟ್ಟು 1.29 ಲಕ್ಷ ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ. ನರೆಗಾ ಯೋಜನೆಗೆ 27 ಸಾವಿರ ಕೋಟಿ, ಕೃಷಿಗೆ 19 ಸಾವಿರ ಕೋಟಿ, ಪಿಎಂ ಕಿಸಾನ್ ಅಡಿ 8 ಸಾವಿರ ಕೋಟಿ ಈ ಎಲ್ಲಾ ಯೋಜನೆಗಳಿಂದ ರಾಜ್ಯದ ಒಟ್ಟು 4.17 ಕೋಟಿ ಫಲಾನುಭವಿಗಳಿಗೆ ತಲುಪಿವೆ. ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಅಲ್ಪ ಸಂಖ್ಯಾತ ಸಮುದಾಯದ ಒಟ್ಟು 2.68 ಕೋಟಿ ವಿದ್ಯಾರ್ಥಿಗಳು ಫಲಾನುಭವಿಗಳಿದ್ದಾರೆ. 50 ಸಾವಿರ ಕೋಟಿ ವೆಚ್ಚದಲ್ಲಿ 3298 ಕಿಮೀ ಹೆದ್ದಾರಿ ರಸ್ತೆ ರಾಜ್ಯದಲ್ಲಿ ನಿರ್ಮಾಣವಾಗಿದೆ.
ನಗರಾಭಿವೃದ್ಧಿಗೆ ಕೇಂದ್ರದಿಂದ 13 ಸಾವಿರ ಕೋಟಿ ನೀಡಲಾಗಿದೆ. ಮಹಿಳಾ ಸುರಕ್ಷತೆಗಾಗಿ ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆ, ಉಜ್ವಲ ಯೋಜನೆ, ಮೀನುಗಾರರಿಗೆ ಕೆಸಿಸಿ ಕಾರ್ಡ್ ವಿತರಣೆ, ಆಯುಷ್ಮಾನ್ ಭಾರತ್ ಯೋಜನೆಯಡಿ ರಾಜ್ಯದ ಜನತೆಗೂ ಆರೋಗ್ಯ ರಕ್ಷಣೆ, ಪ್ರಧಾನಮಂತ್ರಿ ಜನೌಷಧ ಯೋಜನೆಯಡಿ ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧ ವಿತರಣೆ, ಜನಧನ್ ಯೋಜನೆ, ಸ್ವಚ್ಚ ಭಾರತ ಅಭಿಯಾನ, ಪ್ರಧಾನಮಂತ್ರಿ ಆವಾಸ ಯೋಜನೆ, ಗರೀಬ್ ಕಲ್ಯಾಣ ಯೋಜನೆ, ಫಸಲ್ ಬಿಮಾ ಯೋಜನೆ, ಜಲ ಜೀವನ ಮಿಷಿನ್ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ದೇಶ, ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದು ವಿವರಿಸಿದರು.
ಇದೇ ರೀತಿ ರಾಜ್ಯ ಸರತಕಾರ ಕೂಡ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಎರಡು ವರ್ಷ ಇಡೀ ಜಗತ್ತೆ ನಲುಗುವಂತೆ ಮಾಡಿದ ಕೋವಿಡ್ ಅವಧಿಯಲ್ಲಿ ಉಚಿತ ಲಸಿಕೆ ನೀಡಿದ್ದು, ಬಡವರಿಗೆ ಅಕ್ಕಿ ವಿತರಣೆ, ತಲಾ 20 ಲಕ್ಷ ವೆಚ್ಚದಲ್ಲಿ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ, 750 ಗ್ರಾಪಂಗಳಿಗೆ ಅಮೃತ ಯೋಜನೆಯಡಿ ಆರ್ಥಿಕ ನೆರವು, 7500 ಸ್ತ್ರೀ ಶಕ್ತಿ ಸಂಘಗಳಿಗೆ ಆರ್ಥಿಕ ನೆರವು, ಕಳೆದ 4 ತ್ರೈಮಾಸಿಕ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕವೇ ನಂ. 1 ಆಗಿದೆ. ದಾವೋಸ್ ನಲ್ಲಿ 60 ಸಾವಿರ ಕೋಟಿ ಮೌಲ್ಯದ ಹೂಡಿಕೆಗೆ ಒಪ್ಪಂದ, ರಾಜ್ಯಕ್ಕೆ ಬಂದ ನಂತರ 1.15 ಲಕ್ಷ ಕೋಟಿ ಹೂಡಿಕೆಗೆ ಒಪ್ಪಂದ ಹಾಕಲಾಗಿದೆ.
ಇದರಿಂದಾಗಿ ನೇರ ಬಂಡವಾಳ ಮತ್ತು ಸಾವಿರಾರು ಉದ್ಯೋಗ ಸೃಷ್ಟಿಯಾಗಲಿವೆ. ರಾಜ್ಯದಲ್ಲಿ 2275 ಕಿಮೀ ರಸ್ತೆ ನಿರ್ಮಾಣಕ್ಕೆ ಒಟ್ಟು 3 ಸಾವಿರ ಕೋಟಿ ನೀಡಲಾಗಿದೆ. ಬಸವ ವಸತಿ ಯೋಜನೆಯಡಿ 5 ಲಕ್ಷ ಮನೆ ವಿತರಣೆ ನಡೆದಿದೆ. ಇನ್ನೂ 4 ಲಕ್ಷ ಮನೆಗಳನ್ನು ಬರುವ ಡಿಸೆಂಬರ್ ಒಳಗೆ ವಿತರಿಸಲಾಗುವುದು ಎಂದರು.
ವಿಜಯನಗರ ನೂತನ ಜಿಲ್ಲೆ ಘೋಷಣೆ ಮಾಡಿದ್ದು ಬಿಜೆಪಿ ಸರ್ಕಾರ. ನೂತನ ಜಿಲ್ಲೆಯ ಅಭಿವೃದ್ಧಿಗಾಗಿ ಈಗಾಗಲೆ ಸಾವಿರ ಕೋಟಿ ಬಿಡುಗಡೆಯಾಗಿದೆ. ಜಿಲ್ಲಾ ಮಟ್ಟದ ಕಚೇರಿಗಳು ಆರಂಭವಾಗಿವೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳ ಲಾಗುವುದು. ಇನ್ನೂ ಐದಾರು ವರ್ಷಗಳಲ್ಲಿ ನೂತನ ಜಿಲ್ಲೆಯನ್ನು ಅಭಿವೃದ್ಧಿ ಜಿಲ್ಲೆಯನ್ನಾಗಿ ಮಾಡುವುದು ಬಿಜೆಪಿ ಸರ್ಕಾರದ ಗುರಿಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಾಧ್ಯಮ ಸಂಚಾಲಕ ಸತ್ಯನಾರಾಯಣ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಬಸವರಾಜ ಕರ್ಕಿಹಳ್ಳಿ, ಹೊಸಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ಕಾಸಿಟ್ಟಿ ಉಮಾಪತಿ, ಮಂಡಲ ಮಾಧ್ಯಮ ಸಂಚಾಲಕಿ ಅನುರಾಧಾ ಇದ್ದರು.