ಚಿಕ್ಕಬಳ್ಳಾಪುರ : ಬೆಂಗಳೂರು ಗ್ರಾಮಾಂತರ, ಕೋಲಾರ ಚಿಕ್ಕಬಳ್ಳಾಪುರ ರಾಮನಗರ ಸೇರಿದಂತೆ ರಾಜ್ಯಾದ್ಯಂತ ಸುಮಾರು ೧.೧ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದ್ದು, ೧.೫ ಲಕ್ಷ ಕುಟುಂಬಗಳು ರೇಷ್ಮೆ ಬೆಳೆಯನ್ನೇ ನೆಚ್ಚಿಕೊಂಡಿದ್ದು ಬೆಳೆ ಕೈಕೊಟ್ಟರೆ ಅವರ ಬದುಕು ದುಸ್ತರ ಆಗಬಾರದು ಎನ್ನುವ ಕಾರಣಕ್ಕಾಗಿ ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಸಂಸದ ಸುಧಾಕರ್ ತಿಳಿಸಿದರು.
ನಗರದ ನಗರಸಭೆ ಆವರಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗಿಯಾದ ನಂತರ ಮಾಧ್ಯಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಗಾರರು ಇರುವ ಕಾರಣ ಇವರ ಹಿತರಕ್ಷಣೆಗಾಗಿ ವಿಮೆ ಪ್ರಸ್ತಾಪ ಮಾಡಲಾಗಿದೆ. ಏಕೆಂದರೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುವ ಹವಾಮಾನ, ಮಳೆಯ ವೈಪರೀತ್ಯದಿಂದ ಹಿಪ್ಪುನೇರಳೆ ಸೊಪ್ಪು ಹಾಗು ರೇಷ್ಮೆ ಹುಳುಗಳಲ್ಲಿ ಅನೇಕ ಸಮಸ್ಯೆಗಳು ಕಂಡುಬರುತ್ತಿವೆ. ನುಸಿ ಮತ್ತು ಕೀಟಗಳ ಹಾವಳಿಯಿಂದ ಹಿಪ್ಪುನೇರಳೆ ಸೊಪ್ಪಿನ ಗುಣಮಟ್ಟ ಮತ್ತು ಇಳುವರಿ ಕುಸಿತ ವಾಗುತ್ತಿದೆ. ಕಳಪೆ, ರೋಗಪೀಡಿತ ಮೊಟ್ಟೆಗಳ ಚಾಕಿಯಿಂದ ರೇಷ್ಮೆ ಹುಳು ಸಾಕಾಣಿಕೆಗೆ ಸಂಕಷ್ಟ ಎದುರಾಗಿರುವುದನ್ನು ರೇಷ್ಮೆ ಬೆಳೆಗಾರರು ನನ್ನ ಗಮನಕ್ಕೆ ತಂದಿದ್ದರು.ಹೀಗಾಗಿ ನನಗಿರುವ ಅವಕಾಶ ಬಳಸಿಕೊಂಡು ಕೇಂದ್ರಸರಕಾರದ ಗಮನ ಸೆಳೆಯುವ ಕೆಲಸ ಮಾಡಲಾಗಿದೆ ಎಂದರು.
ಪ್ರತಿಕೂಲ ಪರಿಸ್ಥಿತಿಯಲ್ಲಿ ಕೃಷಿ ಹಾಗು ತೋಟಗಾರಿಕೆ ಬೆಳೆಗಳಿಗೆ ಇರುವಂತೆ ರೇಷ್ಮೆ ಕೃಷಿಗೂ ಫಸಲ್ ಭೀಮಾ ಯೋಜನೆಯ ಮಾದರಿಯಲ್ಲಿ ವಿಮೆ ಸೌಲಭ್ಯ ಕಲ್ಪಿಸಿದರೆ ಬೆಳೆಗಳು ಕೈಸೇರದ ಸಂದರ್ಭದಲ್ಲಿ ಲಕ್ಷಾಂತರ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ನಿಯಮ ೩೭೭ರ ಅಡಿಯಲ್ಲಿ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ.ಇದನ್ನು ಇದೇ ಚಳಿಗಾಲದ ಅಧಿವೇಶನದಲ್ಲಿ ಜಾರಿಮಾಡಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.