Friday, 13th December 2024

ಶೋಭಾ ಕಾರಿನ ಬಾಗಿಲು ದ್ವಿಚಕ್ರ ವಾಹನಕ್ಕೆ ತಾಗಿ ಅಪಘಾತ

ಬೆಂಗಳೂರು: ಶೋಭಾ ಕರಂದ್ಲಾಜೆ ಅವರಿಗೆ ಸೇರಿದ್ದ ಕಾರಿನ ಬಾಗಿಲು ದ್ವಿಚಕ್ರ ವಾಹನಕ್ಕೆ ತಾಗಿ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ಪ್ರಕಾಶ್ (60) ಎಂಬುವವರು ಮೃತಪಟ್ಟಿದ್ದಾರೆ.

ಕೆ.ಆರ್.ಪುರದ ಗಣಪತಿ ದೇವಸ್ಥಾನ ಬಳಿ ಸೋಮವಾರ ಮಧ್ಯಾಹ್ನ ಅವಘಡ ಸಂಭವಿಸಿದೆ.

ಅಪಘಾತ ಸಂಬಂಧ ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

‘ಲೋಕಸಭಾ ಚುನಾವಣೆ ಪ್ರಚಾರ ರ‍್ಯಾಲಿಗೆಂದು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಸೋಮವಾರ ಕೆ.ಆರ್.ಪುರಕ್ಕೆ ಬಂದಿದ್ದರು. ಅವರಿಗೆ ಸೇರಿದ್ದ ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಇದೇ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರ ಪ್ರಕಾಶ್ ಹೊರಟಿದ್ದರು.’

‘ಕಾರಿನ ಚಾಲಕ ದಿಢೀರ್ ಬಾಗಿಲು ತೆರೆದಿದ್ದ. ವೇಗವಾಗಿ ಹೊರಟಿದ್ದ ಪ್ರಕಾಶ್ ಅವರ ದ್ವಿಚಕ್ರ ವಾಹನ, ಕಾರಿನ ಬಾಗಿಲಿಗೆ ಗುದ್ದಿತ್ತು. ಇದರಿಂದಾಗಿ ದ್ವಿಚಕ್ರ ವಾಹನ ಸಮೇತ ಪ್ರಕಾಶ್, ರಸ್ತೆಗೆ ಬಿದ್ದಿದ್ದರು. ಇದೇ ಮಾರ್ಗದಲ್ಲಿ ಅತೀ ವೇಗವಾಗಿ ಹೊರಟಿದ್ದ ಖಾಸಗಿ ಬಸ್ಸಿನ ಚಕ್ರ, ಪ್ರಕಾಶ್ ಅವರ ಮೇಲೆ ಹರಿದಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ತೀವ್ರ ಗಾಯಗೊಂಡಿದ್ದ ಪ್ರಕಾಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಯೇ ಪ್ರಕಾಶ್ ಮೃತಪಟ್ಟಿದ್ದಾರೆ. ಶೋಭಾ ಕರಂದ್ಲಾಜೆ ಅವರ ಕಾರಿನ ಬಾಗಿಲು ದಿಢೀರ್ ತೆರೆದಿದ್ದರಿಂದಲೇ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಕಾರಿನಲ್ಲಿ ಯಾರೆಲ್ಲ ಇದ್ದರು ಎಂಬುದನ್ನು ತಿಳಿದುಕೊಂಡು ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.