Saturday, 23rd November 2024

Chikkaballapur News: ಎಂ.ಸ್ಯಾಂಡ್ ಹೊತ್ತ ಟಪ್ಪರ್‌ಗಳ ಹಾವಳಿಗೆ ವಾಹನ ಸವಾರರು ತತ್ತರ

ಹೆಲ್ಮೆಟ್ ಇಲ್ಲದಿದ್ದರೆ, ಕಣ್ಣಿಗೆ ಬೀಳುವ ಯಮಲೋಕಕ್ಕೆ ತೋರುವುದು ದಾರಿ

ಮುನಿರಾಜು ಎಂ ಅರಿಕೆರೆ              

ಚಿಕ್ಕಬಳ್ಳಾಪುರ: ಎಂಸ್ಯಾಂಡ್ ತುಂಬಿಕೊಂಡು ಯಮವೇಗದಲ್ಲಿ ಸಾಗುವ ಟಿಪ್ಪರ್‌ಗಳ ಹಾವಳಿಯಿಂದಾಗಿ ರಾಷ್ಟ್ರೀಯ ಹೆದ್ದಾರಿ 44 ಅಷ್ಟೇ ಅಲ್ಲದೆ, ತಾಲೂಕಿನಲ್ಲಿ ಜನತೆ ನೆಮ್ಮದಿಯಿಂದ ಜೀವನ ನಡೆಸಲಾಗಲಿ, ಜಾಗರೂಕತೆ ವಹಿಸಿಯೂ ತಮ್ಮ ವಾಹನಗಳಲ್ಲಿ ಅಪಾಯವಿಲ್ಲದಂತೆ ಪ್ರಯಾಣಿಸುವುದಾಗಲಿ ಅಸಾಧ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

ಹೌದು ತಾಲೂಕಿನಲ್ಲಿ ಕಲ್ಲುಕ್ವಾರಿ ಗಣಿಗಾರಿಕೆಯ ಹೆಸರಿನಲ್ಲಿ ಎಗ್ಗುಸಿಗ್ಗಿಲ್ಲದೆ ನಡೆಯುತ್ತಿದ್ದು, ಇದರ ಪರಿಣಾಮ ವಾಗಿ ಬೆಟ್ಟಗುಡ್ಡಗಳನ್ನು ಮನಸೋಯಿಚ್ಚೆ ಬಗೆದು ಎಂಸ್ಯಾಂಡ್ ಜಲ್ಲಿ, ಕಲ್ಲು ಹೀಗೆ ತರಹೆವಾರಿ ವ್ಯಾಪಾರಕ್ಕೆ ಇಳಿದಿರುವ ಗಣಿಕುಳಗಳು ಪರವಾನಿಗೆ ಇದೆ ಎಂಬ ನೆಪವೊಡ್ಡಿ ಪ್ರಕೃತಿಯ ಒಡಲಿಗೆ ಕೊಳ್ಳಿಯಿಟ್ಟು ಕೇಕೆ ಹಾಕುತ್ತಿರುವುದು ನಗ್ನಸತ್ಯವಾಗಿದೆ.

ಪರವಾನಗಿ ಆಧಾರಿತ ಗಣಿಗಾರಿಕೆ ಹೆಸರಿನಲ್ಲಿ ಹವ್ಯಾಹತವಾಗಿ ನಡೆಯುತ್ತಿರುವ ಜಲ್ಲಿ ಕಲ್ಲು, ಕಲ್ಲಿನ ಪುಡಿಯನ್ನು ಸಾಗಿಸಲು ಬಳಕೆಯಾಗುತ್ತರುವ ಸಾವಿರಾರು ಟಿಪ್ಪರ್‌ಗಳ ಹಾವಳಿಗೆ ತಡೆಯೊಡ್ಡುವಲ್ಲಿ ಸಂಬಂಧಪಟ್ಟ ಇಲಾಖೆ ಗಳು ಸಂಪೂರ್ಣವಾಗಿ ಸೋತಿವೆ. ಈ ವಿಚಾರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಜನಪ್ರತಿನಿಧಿಗಳು ಕೊನೆಗೆ ಸರಕಾರವೂ ಕೂಡ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿರುವುದು ವಿಚಿತ್ರವಾದರೂ ಸತ್ಯ.

ಇದೇ ಕಾರಣವಾಗಿ ಜನಸಾಮಾನ್ಯರು ತಮ್ಮ ಜೀವ ಮತ್ತು ಜೀವನವನ್ನು ಅಂಗೈಲಿಡಿದು ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಮಹಾನಗರಕ್ಕೆ ನಿತ್ಯವೂ ಸಾವಿರಾರು ಲೋಡ್‌ಗಟ್ಟಲೆ ಜಲ್ಲಿ ಕಲ್ಲು, ಎಂಸ್ಯಾಡ್, ಡಸ್ಟ್ ಸರಬರಾಜಿಗೆ ತಾಲೂಕಿನ ಬೆಟ್ಟಗುಡ್ಡಗಳಿಂದ ತೆಗೆಯುತ್ತಿರುವ ಕಲ್ಲಿನ ಅವಶೇಷಗಳೇ ಆಧಾರವಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಲಿಸಲೇ ಬೇಕಾದ ಸಂಚಾರಿ ನಿಯಮಗಳನ್ನು ಮನಸೋಯಿಚ್ಚೆ ಗಾಳಿಗೆ ತೂರಿರು ವುದೇ ಜನತೆಗೆ ಸಂಕಷ್ಟವನ್ನು ತಂದೊಡ್ಡಿದೆ.

ಯಮವೇಗದಲ್ಲಿ ಸಾಗುವ ಟಿಪ್ಪರ್‌ಗಳಿಂದಾಗಿ ರಾಷ್ಟ್ರೀಯ ಹೆದ್ದಾರಿ 44 ನಿತ್ಯವೂ ಒಂದಿಲ್ಲೊಂದು ಅನಾಹುತ ಅಪಘಾತಗಳು ಸಂಭವಿಸುತ್ತಾ ಜನರ ಪ್ರಾಣಪಕ್ಷಿ ಹಾರಿಹೋಗುತ್ತಿರುವುದು ನಿತ್ಯಸತ್ಯ. ಪೆರೇಸಂದ್ರ ಕ್ರಾಸ್‌ನಿಂದ ಬೆಂಗಳೂರು ಹೆಬ್ಬಾಳದವರೆಗೆ ಸಂಚಾರ ಮಾಡಬೇಕೆಂದರೆ ಮೈಯಲ್ಲಾ ಕಣ್ಣಾಗಿರಬೇಕು. ಕ್ಷಣ ವ್ಯತ್ಯಾಸವಾದರು ಅನಾಹುತ ತಪ್ಪಿದ್ದಲ್ಲಾ ಎಂಬಂತಹ ಸ್ಥಿತಿಯಿದೆ.

ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದ ಉಂಟಾಗುವ ಅಪಘಾತ ಪ್ರಕರಣಗಳ ಜತೆಗೆ ಹತ್ತು ಹಲವು ಸಮಸ್ಯೆ ಗಳಿಗೆ ಕಾರಣವಾಗಿರುವ ಟಿಪ್ಪರ್‌ಗಳ ಸಂಚಾರಕ್ಕೆ ಕಡಿವಾಣ ಹಾಕಲು ಜಿಲ್ಲಾ ಮತ್ತು ತಾಲೂಕು ಆಡಳಿತ, ಸಂಬಂಧಿಸಿದ ಗಣಿ ಮತ್ತು ಭೂ ವಿಜ್ಞಾನ, ಸಾರಿಗೆ, ಪೋಲಿಸ್ ಇಲಾಖೆಗಳು ಮೀನಮೇಷ ಎಣಿಸುತ್ತಿರುವುದೇಕೆ ಎಂಬ ಪ್ರಶ್ನೆ ಜಿಲ್ಲೆಯ ಜನತೆಯನ್ನು ಇನ್ನಿಲ್ಲದಂತೆ ಕಾಡುಡುತ್ತಿದೆ.

ಎಂಸ್ಯಾಂಡ್ ಹೊತ್ತ ಟಿಪ್ಪರ್ ಗಾಡಿಯು ಅತಿ ವೇಗವಾಗಿ ಚಲಿಸುವಾಗ ಹಿಂಬದಿಯ ಸವಾರರಿಗೆ ಎಂ ಸ್ಯಾಂಡಿನ ಧೂಳಿನ ಕಣಗಳು ಗಾಳಿಯಲ್ಲಿ ಬಂದು ಬಂದು ಅಪ್ಪಳಿಸುವಾಗ ಜೀವಕ್ಕೆ ಗ್ಯಾರಂಟಿಯೇ ಇರುವುದಿಲ್ಲ.ಬೈಕ್ ಕಾರು ಸವಾರರು ತಾವು ವಾಹನ ಚಲಾವಣೆ ತಮ್ಮ ಗಮನ ಕೇಂದ್ರೀಕರಿಸಬೇಕೋ, ಇಲ್ಲವೆ ಲಾರಿ ಟಿಪ್ರ‍್ಗಳಿಂದ ಬೀಳುವ ಕಲ್ಲಿನ ಚೂರುಗಳನ್ನು ತಪ್ಪಿಸಿಕೊಳ್ಳಲು ಹೆಣಗಾಡಬೇಕೋ ತಿಳಿಯದಾಗಿದೆ. ಎಂಸ್ಯಾಂಡ್ ಮೇಲೆ  ಮೇಲು ಹೊದಿಕೆ ಹಾಕಬೇಕೆಂದು ನಿಯಮದೆ. ಆದರೆ ಸಾಕಷ್ಟು ಟಿಪ್ಪರ್‌ಗಳು ಮೇಲುಹೊದಿಕೆ ಹಾಕುವುದೇ ಇಲ್ಲಾ. ಮೇಲುಹೊದಿಕೆ ಹಾಕಿದರೂ ಅದು ಹರಿದು ಹೋಗಿ ತೂತು ಬಿದ್ದಿರುತ್ತವೆ.ಈ ಹರಿದು ಹೋಗಿ ತೂತು ಬಿದ್ದಿರುವ ಜಾಗದಿಂದ ಎಂಸ್ಯಾಡ್ ಕಣಗಳು, ಜಲ್ಲಿ ಕಲ್ಲುಗಳು ಗಾಳಿಗೆ ಹಾರಿ ಬಂದು ವಾಹನ ಸವಾರರ ಮೇಲೆ ಬಿದ್ದು ಸಾಕಷ್ಟು ಅಪಘಾತ ಗಳು ಆಗಿವೆ.

ಕ್ರಷರ್‌ಗಳ ಟಿಪ್ಪರ್‌ಗಳು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಅತಿ ವೇಗವಾಗಿ ಚಲಾಯಿಸುವುದರಿಂದ ಸಂಚಾರಿ ಪೊಲೀಸ್ ಠಾಣೆ ಅಥವಾ ಆರ್‌ಟಿಓ ಗಳು ಟಿಪ್ಪರ್ ಮಾಲೀಕರು ಮತ್ತು ಡ್ರೈವರ್‌ಗಳ ಬಗ್ಗೆ ಕಾನೂನು ಪ್ರಕಾರ ಕ್ರಮಕ್ಕೆ ಮುಂದಾದರೆ, ಟಿಪ್ಪರ್ ಮಾಲೀಕರು ಆರ್‌ಟಿಓ  ಅಧಿಕಾರಿಗಳನ್ನೇ ಹೊಡೆಯಲು ಬರುತ್ತಾರಂತೆ  ಎಂದು  ಶಾಸಕ ಪ್ರದೀಪ್ ಈಶ್ವರ್ ಇತ್ತೀಚೆಗೆ ತಮ್ಮ ಅಸಹಾಯಕತೆ ತೋಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಗಣಿಗಾರಿಕೆ ನಿಲ್ಲಿಸುವ ವಿಚಾರದಲ್ಲಿ ಲೋಕಸಭಾ ಸದಸ್ಯ ಡಾ.ಕೆ.ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ನಡುವೆ ಹಗ್ಗಜಗ್ಗಾಟ ನಡೆದಿದ್ದು ಇದರಲ್ಲಿ ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಆದರೆ ರಾಜಕಾರಣಿಗಳು ತಮ್ಮ ರಾಜಕೀಯ ಜೀವನ ಭದ್ರಪಡಿಸಿಕೊಳ್ಳಲು ಏನುಬೇಕಾದರೂ ಮಾಡಿಕೊಳ್ಳಲಿ ಮತಹಾಕಿ ಗೆಲ್ಲಿಸಿ ಅಧಿಕಾರಸ್ಥಾನದಲ್ಲಿ ಕೂರಿಸಿದ ಮತದಾರ ಪ್ರಭುವಿನ ಜೀವದ ಜತೆ ಚೆಲ್ಲಾಟವಾಡದಿದ್ದರೆ ಸಾಕು ಎನ್ನುವುದು ಕ್ಷೇತ್ರದ ಜನತೆಯ ಮಾತಾಗಿದೆ.

ಇದನ್ನೂ ಓದಿ: Chikkaballapur News: ಚೆಕ್ ಡ್ಯಾಮ್ ನಿರ್ಮಾಣ ಹಾಗೂ ರಸ್ತೆ ದುರಸ್ತಿಗೆ ರೈತರ ಆಗ್ರಹ