Wednesday, 11th December 2024

Chickballapur Muncipality Election: ನಗರಸಭೆ ಚುನಾವಣೆ ಗೆದ್ದು ಬೀಗಿದ ಸುಧಾಕರ್; ಸೋತು ಬಾಗಿದ ಪ್ರದೀಪ್ ಈಶ್ವರ್

ಕೋರ್ಟ್ ಆದೇಶಕ್ಕೆ ಬದ್ಧವಾದ ಚುನಾವಣಾ ಫಲಿತಾಂಶ : ಬಿಜೆಪಿಯಿಂದ ಸಂಭ್ರಮಾಚರಣೆ

ಸಂಸದ ಡಾ.ಕೆ. ಸುಧಾಕರ್, ನೂತನ ಅಧ್ಯಕ್ಷ ಗಜೇಂದ್ರ ಉಪಾಧ್ಯಕ್ಷ ಜೆ.ನಾಗರಾಜ್ ಅವರ ಮೆರವಣಿಗೆ

ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಗುರುವಾರ ಮಧ್ಯಾಹ್ನ 2ಕ್ಕೆ ಪೂರ್ಣವಿರಾಮ ಬಿದ್ದಿದೆ.

ನಿರೀಕ್ಷೆಯಂತೆ ಸಂಸದ ಸುಧಾಕರ್ ಬೆಂಬಲಿತರಾದ 4ನೇ ವಾರ್ಡಿನ ಗಜೇಂದ್ರ 19 ಮತ ಪಡೆದು ಅಧ್ಯಕ್ಷರಾದರೆ, 5ನೇ ವಾರ್ಡಿನ ಜೆ.ನಾಗರಾಜ್ 19 ಮತಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 15ನೇ ವಾರ್ಡಿನ ಅಂಬರೀಶ್‌ಗೆ 16 ಮತಗಳು, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 30ನೇ ವಾರ್ಡಿನ ಮೀನಾಕ್ಷಿ ವೆಂಕಟೇಶ್ 15 ಮತ ಪಡೆದು ಪರಾಭವಗೊಳ್ಳುವ ಮೂಲಕ ಶಾಸಕ ಪ್ರದೀಪ್ ಈಶ್ವರ್‌ಗೆ ಭಾರೀ ಮುಖಭಂಗವಾದಂತಾಗಿದೆ.

ಹೈಕೋರ್ಟ್ ನಿರ್ದೇಶನ ಇರುವುದರಿಂದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಜಿಲ್ಲಾ ಉಪವಿಭಾಗಾಧಿ ಕಾರಿ ಆರ್.ಅಶ್ವಿನ್ ಈ ಫಲಿತಾಂಶ ಘೋಷಿಸದೆ ತಡೆ ಹಿಡಿದಿದ್ದಾರೆ.

ಏನೇ ಇರಲಿ ಗುರುವಾರ ನಡೆದ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಅಕ್ಷರಶಃ ರಣರಂಗದಂತೆ ಕಂಡು ಬಂದಿತು. ಕಾರಣ 19 ಸದಸ್ಯರ ಬಲದ ಡಾ.ಕೆ. ಸುಧಾಕರ್ ಪಡೆ ಅಧಿಕಾರಕ್ಕೇರುವುದೋ 16 ಸದಸ್ಯಬಲದ ಪ್ರದೀಪ್ ಈಶ್ವರ್ ಪಡೆಗೆ ಒಲಿಯುವುದೋ ಎನ್ನುವ ಬಗ್ಗೆ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು.

ಇದೇ ವಿಚಾರವಾಗಿ ನಾನಾ ನೀನಾ ಎಂಬಂತೆ ಪರಸ್ಪರ ಸ್ಫರ್ಧೆಗೆ ಬಿದ್ದಿದ್ದ ಎಂಪಿ ಮತ್ತು ಎಂಎಲ್‌ಎಗಳಲ್ಲಿ ಸಂಸದ ಸುಧಾಕರ್ ಅಂದುಕೊಂಡಂತೆ ತನ್ನವರನ್ನು ಗೆಲ್ಲಿಸಿಕೊಂಡು ಗೆದ್ದು ಬೀಗಿದ್ದರೆ, ಅಧಿಕಾರ ನಮ್ಮದೇ ಎನ್ನುತ್ತಿದ್ದ ಶಾಸಕ ಪ್ರದೀಪ್ ಈಶ್ವರ್ ಕಾಂಗ್ರೆಸ್ ಸದಸ್ಯರಿಂದಲೇ ಸೋತು ಅಪಮಾನಕ್ಕೀಡಾಗುವಂತೆ ಆಗಿದೆ.

ಇದನ್ನೂ ಓದಿ: Dr K Sudhakar: ಜಿಲ್ಲೆಗೆ ನೀರು ಕೊಡುವ ಉದ್ದೇಶ ಇದ್ದರೆ ಆಂಧ್ರದ ಕೃಷ್ಣಾನದಿ ನೀರು ಕೊಡಿ- ಡಾ.ಕೆ.ಸುಧಾಕರ್

ನಿಗದಿತ ಸಮಯಕ್ಕೂ ಮೊದಲೇ ಕಾಂಗ್ರೆಸ್ ಪಕ್ಷದ-10 ಸದಸ್ಯರು, ಜೆಡಿಎಸ್-2, ಪಕ್ಷೇತರ-1, ಎಂಎಲ್‌ಎ-1, ಎಂಎಲ್ಸಿ-2 ಒಟ್ಟು 16 ಮಂದಿ ಚುನಾವಣೆ ನಡೆಯುತ್ತಿದ್ದ ನಗರಸಭೆಗೆ ಹಾಜರಾಗಿದ್ದರು. ಆದರೆ ಬಿಜೆಪಿ ತಂಡ ಮಾತ್ರ ಇತ್ತ ಸುಳಿದೇ ಇರಲಿಲ್ಲ. ಮಧ್ಯಾಹ್ನ ಒಂದು ಗಂಟೆಗೆ ತಾನೂ ಸೇರಿದಂತೆ ೧೯ ಸದಸ್ಯರನ್ನು ಬಸ್ಸಿನಲ್ಲಿ ಕರೆದುಕೊಂಡು ಬಂದ ಸಂಸದ ಡಾ.ಕೆ. ಸುಧಾಕರ್ ಬಂದವರೇ ಹೈಡ್ರಾಮ್ ಶುರು ಮಾಡಿದರು.

ಎಂ.ಪಿ.ಹೈಡ್ರಾಮ
ನಗರಸಭೆ ಗೇಟಿನ ಮುಂದೆ ಭದ್ರತೆಗಿದ್ದ ನೂರಾರು ಪೊಲೀಸರ ನಡುವೆ ತಮ್ಮ ಪಕ್ಷದಿಂದ ಆರಿಸಿ ಬಂದು ಬಿಜೆಪಿ ಬೆಂಬಲಿಸಿರುವ ಸದಸ್ಯರಿಗೆ ವಿಫ್ ನೀಡಲು ನಿಂತಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಪ್ರಧಾನ ಕಾರ್ಯದರ್ಶಿ ಪ್ರೆಸ್ ಸುರೇಶ್ ಅವರನ್ನು ಕಂಡಿದ್ದೇ ಕೆಂಡಾಮಂಡಲರಾದರು. ಸಹನೆ ಕಳೆದುಕೊಂಡ ಸುಧಾಕರ್ ಪೊಲೀಸರಿಗೆ ಕಾನೂನು ಪಾಠ ಮಾಡಿದರು.

ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರ ಮೇಲೂ ಏಕವಚನದಲ್ಲಿ ರೇಗಾಡಿ,ವಿಫ್ ಎಲ್ಲಿ ನೀಡಬೇಕು ಹೇಗೆ ನೀಡಬೇಕು ಎನ್ನುವ ಬಗ್ಗೆ ಗೊತ್ತಿದೆ. ನಿಷೇಧಿತ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರನ್ನು ನಿಲ್ಲಿಸಿಕೊಂಡಿರುವುದು ಪೊಲೀಸರ ತಪ್ಪು. ಮತದಾರ ಅಲ್ಲದವರು ಗೇಟಿನಿಂದ ೨೦೦ ಮೀಟರ್ ದೂರ ಇರಬೇಕು ಎಂದು ಕಾನೂನು ಮಾಡಿ ಅವರನ್ನು ಹೇಗೆ ಬಿಟ್ಟಿದ್ದೀರಿ ಎಂದು ಕೂಗಾಡಿದರು.

ಅವರನ್ನು ಕಳಿಸುವವರೆಗೂ ಬಸ್ಸಿಂದ ಕೆಳಗಿಳಿಯುವುದಿಲ್ಲ, ಚುನಾವಣೆ ಬಹಿಷ್ಕರಿಸುವುದಾಗಿ ಕಿರುಚಾಡಿದರು. ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬಂದು ಮನವೊಲಿಸಿದರೂ ಕ್ಯಾರೆ ಎನ್ನದೆ ಚುನಾವಣಾಧಿಕಾರಿಗಳನ್ನೇ ಗೇಟ್ ಬಳಿ ಕರೆಸಿಕೊಂಡು ಅವರಿಗೂ ಅವರ ಕರ್ತವ್ಯವನ್ನು ನೆನಪಿಸಲು ಮುಂದಾದರು. ಇದರಿಂದ ಮುಜುಗರಕ್ಕೆ ಒಳಗಾದ ಚುನಾವಣಾಧಿಕಾರಿ ನೋಡಿ 1.20ರ ಒಳಗೆ ನೀವು ಚುನಾವಣಾ ಪ್ರಕ್ರಿಯೆಯಲ್ಲಿ ಬಂದು ಭಾಗವಹಿಸಿಲ್ಲ ಎಂದರೆ ನಿಗಧಿತ ಕೋರಂ ಇಲ್ಲ ಎಂದು ಚುನಾವಣೆ ಮುಂದೂಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದೇ ತಡ ಒಬ್ಬೊಬ್ಬರಾಗಿ ಬಸ್ಸಿಳಿದು ಮತದಾನ ಕೇಂದ್ರದತ್ತ ನಡೆದರು.

ಫಲಿತಾಂಶಕ್ಕೆ ತಡೆಯಿದೆ ?
ಒಟ್ಟಾರೆ ತೀವ್ರ ಕುತೂಹಲ ಕೆರಳಿಸಿದ್ದ 14 ತಿಂಗಳ ಅವಧಿಯ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಮುಗಿದಿದ್ದರೂ, ಅಧಿಕೃತವಾಗಿ ಫಲಿತಾಂಶ ಪ್ರಕಟವಾಗದ ಸ್ಥಿತಿ ನಿರ್ಮಾಣವಾಗಿದೆ. ಕಾರಣ ಮಾಜಿ ನಗರಸಭೆ ಅಧ್ಯಕ್ಷ ಆನಂದಬಾಬುರೆಡ್ಡಿ ಎಂಎಲ್‌ಸಿಗಳಿಗೆ ಮತದಾನದ ಸಿಂಧುತ್ವದ ಬಗ್ಗೆ ಹೈಕೋರ್ಟಿನಲ್ಲಿ ರಿಟ್ ಪಿಟಿಷನ್ ದಾಖಲು ಮಾಡಿದ್ದರು. ಈ ಸಂಬಂಧ ಸೆ.11ರಂದು ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.ಮತದಾನದ ಸಂಪೂರ್ಣ ಮಾಹಿತಿಯನ್ನು ಕೋರ್ಟಿಗೆ ನೀಡಬೇಕಿರುವುದರಿಂದ ಅಂತಿಮ ತೀರ್ಪಿನ ಬಳಿಕವಷ್ಟೇ ಚುನಾವಣಾಧಿ ಕಾರಿ ಅಧಿಕೃತ ಫಲಿತಾಂಶ ಘೋಷಣೆಯಾಗಲಿದೆ ಎನ್ನುವುದು ಉಪವಿಭಾಗಾಧಿಕಾರಿ ಆರ್.ಅಶ್ವಿನ್ ಮಾತಾಗಿದೆ.

ವಿಜಯೋತ್ಸವ
ಗುರುವಾರ ನಡೆದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಫಲಿತಾಂಶ ಬಿಜೆಪಿ ಬೆಂಗಲಿತರೇ ಅಧಿಕಾರಕ್ಕೇರಿ ರುವುದನ್ನು ಸ್ಪಷ್ಟವಾಗಿ ಹೇಳುತ್ತಿದ್ದರೂ, ಕೋರ್ಟಿನ ನಿರ್ಬಂಧ ಇರುವುದರಿಂದ ಚುನಾವಣಾಧಿಕಾರಿ ಘೋಷಣೆ ಮಾಡಲಾಗಿಲ್ಲ.ಇದರ ಹೊರತಾಗಿಯೂ ಸಂಸದ ಸುಧಾಕರ್, ನೂತನ ಅಧ್ಯಕ್ಷ ಅಂಬರೀಶ್, ಉಪಾಧ್ಯಕ್ಷ ಜೆ.ನಾಗರಾಜ್ ಅವರನ್ನು ನಗರದ ರಾಜಬೀದಿಗಳಲ್ಲಿ ಹೂಮಳೆ ಸುರಿಸುವ ಮೂಲಕ ಬಾಜಾ ಭಜಂತ್ರಿಯೊಂದಿಗೆ ಮೆರವಣಿಗೆ ಮಾಡಲಾಯಿತು. ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು ಬಿಜೆಪಿ ಮುಖಂಡರ ಸಂಭ್ರಮ ಮುಗಿಲು ಮುಟ್ಟಿತ್ತು.