ಬೆಂಗಳೂರು: ಅತಿ ಹೆಚ್ಚು ತೆರೆಗೆ ಪಾವತಿಸುವ ಕರ್ನಾಟಕ ರಾಜ್ಯಕ್ಕೇ ನರೇಂದ್ರ ಮೋದಿ ಸರ್ಕಾರ ಮಾತ್ರ ಶೂನ್ಯ ಕೊಡುಗೆ ನೀಡುವ ಮೂಲಕ ಜನಸಾಮಾನ್ಯರ ಕೈಗೆ ಖಾಲಿ ಚೊಂಬು ಕೊಟ್ಟಿದ್ದಾರೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರೊ. ಎಂ.ವಿ. ರಾಜೀವ್ ಗೌಡ ಅವರು ವ್ಯಂಗ್ಯವಾಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿರುವುದನ್ನು ವಿರೋಧಿಸಿ ಬೂಪಸಂದ್ರದ ಬಸ್ ನಿಲ್ದಾಣದ ಬಳಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ “ಚೊಂಬು” ಹಿಡಿದು ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ಭಾರತೀಯ ರಿಸರ್ವ್ ಬ್ಯಾಂಕ್‌ನ ಕೇಂದ್ರ ಮಂಡಳಿ ನಿರ್ದೇಶರು, ರಾಜ್ಯಸಭಾ ಮಾಜಿ ಸದಸ್ಯರು ಆದ ಪ್ರೊ. ಎಂ.ವಿ. ರಾಜೀವ್ ಗೌಡ ಅವರು, ಕರ್ನಾಟಕ ಅದರಲ್ಲೂ ಬೆಂಗಳೂರು ನಗರ ಹೆಚ್ಚು ತೆರಿಗೆ ಪಾವತಿಸುತ್ತಾ ಬಂದಿದೆ, ಆದರೆ, ಈ ಕೇಂದ್ರ ಸರ್ಕಾರ ತನ್ನ ಪಕ್ಷಗಳು ಆಳ್ವಿಕೆ ಇರುವ ರಾಜ್ಯಗಳಿಗೆ ಎತೇಚ್ಚವಾಗಿ ಹಣ ಬಿಡುಗಡೆ ಮಾಡಿ, ಕರ್ನಾಟಕಕ್ಕೆ ಮಾತ್ರ ಮಲತಾಯಿ ಧೋರಣೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ರಾಜ್ಯಕ್ಕೆ ನೀಡಿರುವ ಕೊಡುಗೆ ಶೂನ್ಯವಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ನಾಡಿನ ಜನತೆಗೆ “ಚೊಂಬು” ನೀಡಿದ್ದಾರೆ.
ಬರ ಪರಿಹಾರ ವಿಚಾರದಲ್ಲಿಯೂ ಸಹ ನಮಗೆ ಮೋಸ ಮಾಡಿದ್ದಾರೆ, ಅಷ್ಟೇ ಏಕೆ, ತಾವು ಅಧಿಕಾರಕ್ಕೆ ಬರುವ ಅತಿಯಾಸೆಯಿಂದ ಎಲ್ಲರ ಖಾತೆಗೆ ೧೫ ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಹೇಳಿದ್ದು ಮಾತ್ರ ದೊಡ್ಡ ಮೋಸ. ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ೨೫ ಜನ ಲೋಕಸಭಾ ಸದಸ್ಯರು ರಾಜ್ಯಕ್ಕೆ ನೀಡಿದ್ದು ಚೊಂಬು ಹೀಗೆ ಇಷ್ಟೆಲ್ಲಾ ಚೊಂಬುಗಳನ್ನು ನೀಡಿರುವ ಬಿಜೆಪಿ ಪಕ್ಷಕ್ಕೆ ಈ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸ್ವಾಭಿಮಾನ ಕನ್ನಡಿಗರು ಸಹ ಅದೇ ಚೊಂಬನ್ನು ನೀಡಿ ಮನೆಗೆ ಕಳುಹಿಸಿಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಚಿವರಾದ ಬೈರತಿ ಸುರೇಶ್, ಕಾಂಗ್ರೆಸ್ ವಕ್ತಾರರಾದ ಎ.ಎನ್. ನಟರಾಜ್ ಗೌಡ, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.