Friday, 29th November 2024

Mysore Sandal: ಮೈಸೂರು ಸ್ಯಾಂಡಲ್ ಉತ್ಪನ್ನಗಳ ಮೇಳ ಇಂದಿನಿಂದ

ಶ್ರೀಗಂಧ ಬೆಳೆಯಲು 900 ರೈತರೊಂದಿಗೆ ಒಪ್ಪಂದ : ಗಂಗಪ್ಪ

ತುಮಕೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆ.ಎಸ್.ಡಿ.ಎಲ್) ಸಂಸ್ಥೆ ರಾಜ್ಯಾದ್ಯಂತ ಶ್ರೀಗಂಧವನ್ನು ಬೆಳೆಯಲು 900 ರೈತರ ಒಪ್ಪಂದ ಮಾಡಿಕೊಂಡಿದೆ ಎಂದು ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಗಂಗಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರ್ ಸ್ಯಾಂಡಲ್ ಸೋಪಿಗೆ ರಾಜ್ಯ ಸೇರಿದಂತೆ ದೇಶ, ವಿದೇಶಗಳಲ್ಲಿ ಒಳ್ಳೆಯ ಬೇಡಿಕೆಯಿದೆ. ರೈತರು ಬೆಳೆಯುವ ಶ್ರೀಗಂಧವನ್ನು ಬಳಸಿ ಗುಣಮಟ್ಟದ ಸೋಪನ್ನು ತಯಾರಿಸಲಾಗುತ್ತದೆ. ಹೊಸದಾಗಿ ರೈತರು ಶ್ರೀಗಂಧವನ್ನು ಬೆಳೆಯುವ ಆಸಕ್ತಿ ತೋರಿದರೆ ಸಂಸ್ಥೆಯು ಅವರಿಗೆ ಎಲ್ಲಾ ರೀತಿಯ ಸವಲತ್ತು ಒದಗಿಸುತ್ತದೆ ಎಂದರು.

ಬಹುರಾಷ್ಟ್ರೀಯ ಸಂಸ್ಥೆಗಳ ತೀವ್ರ ಪೈಪೋಟಿಯ ನಡುವೆಯೂ ನಮ್ಮ ಸಂಸ್ಥೆ ಹೆಚ್ಚಿನ ವಹಿವಾಟು ಹೊಂದಿದ್ದು, ೨೦೨೩-೨೪ ಸಾಲಿನಲ್ಲಿ ೧೫೭೦ ಕೋಟಿ ರೂ. ವಹಿವಾಟು ನಡೆಸಿ ಅಂದಾಜು ನಿವ್ವಳ ೩೬೨ ಕೋಟಿ ರೂ.ಗಳ ಲಾಭ ಗಳಿಸಿದೆ. ಪ್ರಸ್ತುತ ಆರ್ಥಿಕ ವರ್ಷ ೨೦೨೪-೨೫ರಲ್ಲಿ ನಮ್ಮ ಉತ್ಪನ್ನಗಳ ಮಾರಾಟದಲ್ಲಿ ಎಲ್ಲಾ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸೆಪ್ಟೆಂಬರ್ ೨೪ರವರೆಗಿನ ಮಾರಾಟದಲ್ಲಿ ೯೦೧.೩೯ ಕೋಟಿ ವಹಿವಾಟು ನಡೆದಿದೆ ಎಂದರು.

ನಮ್ಮ ಸಂಸ್ಥೆಯ ೧೯ ಉತ್ಪನ್ನಗಳು ಮೂರು ಬಾರಿ ಸಿಎಂ ರತ್ನ ಪ್ರಶಸ್ತಿಗೆ ಭಾಜನವಾಗಿದ್ದು, ಪರಿಸರ ಸ್ನೇಹಿ ಉದ್ಯಮ ಪ್ರಶಸ್ತಿಯನ್ನು ಪಡೆದಿದೆ. ಅಲ್ಲದೆ ನಮ್ಮ ಉತ್ಪನ್ನಗಳು ೨೦ ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ನಗರದಲ್ಲಿ ೧೦ ದಿನಗಳ ಕಾಲ ನಡೆಯುವ ಸಾಬೂನು ಮೇಳದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಭಾರತದಲ್ಲಿ ೬ ಕಡೆ ನಮ್ಮ ಶಾಖಾ ಕಚೇರಿಗಳಿದ್ದು, ನಮ್ಮ ಸಂಸ್ಥೆ ರಾಜ್ಯದ ೯೦೦ ರೈತರೊಂದಿಗೆ ಒಡಂಬಡಿಕೆ ಮಾಡಿ ಕೊಂಡಿದೆಯಲ್ಲದೆ, ೩೩೦೮ ಹೆಕ್ಟೇರ್ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲು ನಮ್ಮ ಸಂಸ್ಥೆ ವತಿಯಿಂದ ಸಸಿಗಳನ್ನು ವಿತರಿಸಿ ಅವುಗಳನ್ನು ಬೆಳೆಸಲು ಮಾರ್ಗದರ್ಶನ, ದರ ನಿಗಧಿ, ಇತ್ಯಾದಿ ಸೇವೆಯನ್ನು ಒದಗಿಸಲಾಗುತ್ತಿದೆ ಎಂದರು.

ಶ್ರೀಗಂಧದ ಸಸಿಯನ್ನು ೧೦ ರಿಂದ ೧೫ ವರ್ಷಗಳ ನಂತರ ಕಟಾವಿಗೆ ಬರುತ್ತವೆ. ಅರಣ್ಯ ಇಲಾಖೆ ನಿರ್ದೇಶನದಂತೆ ಮರದ ಕಾಂಡ, ರೆಂಬೆ, ಬೇರುಗಳು ಹೀಗೆ ವಿವಿಧ ಭಾಗಕ್ಕೆ ದರ ನಿಗದಿ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಗುರುಪ್ರಸಾದ್ ಇದ್ದರು.

ಮೈಸೂರು ಸ್ಯಾಂಡಲ್ ಉತ್ಪನ್ನಗಳ ಮೇಳ

ತುಮಕೂರು ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಅ.22 ರಿಂದ ಅ.31 ರವರೆಗೆ ಮೈಸೂರು ಸ್ಯಾಂಡಲ್ ಉತ್ಪನ್ನಗಳ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು ಎಂದು ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಗಂಗಪ್ಪ ತಿಳಿಸಿದರು.

ಇದನ್ನೂ ಓದಿ: Tumkur News: ಅಧಿಕಾರಿಗಳ ಅಲಭ್ಯತೆ-ಪರಿಶಿಷ್ಟ ಕಲ್ಯಾಣ ಸಮಿತಿ ಸಭೆ ಮುಂದೂಡಿಕೆ