Thursday, 3rd October 2024

Mysore News: ಮಂಡಕಳ್ಳಿಯ ಸರ್ಕಾರಿ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮೇಲ್ದರ್ಜೇಗೇರಿಸಲು ಕ್ರಮ: ಶಾಸಕ ಜಿ.ಟಿ. ದೇವೇಗೌಡ

Mysore News

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ (Government Schools) ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ ಸರ್ಕಾರಿ ಶಾಲಾ-ಕಾಲೇಜುಗಳ ಜಾಗದ ಸುತ್ತಲೂ ಕಾಂಪೌಂಡ್ ಹಾಕಿಸಿ, ಸಂರಕ್ಷಣೆ ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು. ತಾಲೂಕಿನ (Mysore News) ಮಂಡಕಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಲಯನ್ಸ್ ಸಂಸ್ಥೆಯವರು ಕಟ್ಟಿಸಿಕೊಡುತ್ತಿರುವ ಶೌಚಾಲಯ, ಕಾಂಪೌಂಡ್, ಕುಡಿಯುವ ನೀರಿನ ಘಟಕದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಶಾಲೆಗಳ ಸುತ್ತಮುತ್ತಲ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿಸಬೇಕು. ಅದಕ್ಕೆ ತಕ್ಕಂತೆ ಸ್ಕೆಚ್, ಖಾತೆ ಮಾಡಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಜಂಟಿಯಾಗಿ ಸೇರಿ ಆಯಾಯ ಶಾಲೆಗಳ ಮುಖ್ಯೋಪಾಧ್ಯಾಯರೊಂದಿಗೆ ಕುಳಿತು ಬೇಗನೆ ಕೆಲಸ ಮುಗಿಸಬೇಕು ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಕರ್ನಾಟಕ ಸುವರ್ಣ ಸಂಭ್ರಮ-50 ಸಮಾರೋಪ; ಕನ್ನಡ ಜನೋತ್ಸವವಾಗಿ ಆಚರಿಸಲು ಸಿಎಂ ನಿರ್ಧಾರ

ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಸಿಕ್ಕ ಅವಧಿಯಲ್ಲಿ ಸರ್ಕಾರಿ ಪದವಿ ಪೂರ್ವ, ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೆ ಗಮನಹರಿಸಿದ್ದೆ. 393 ಪ್ರಾಂಶುಪಾಲರನ್ನು ನೇಮಕ ಮಾಡುವ ಜತೆಗೆ ಕಟ್ಟಡ, ಶೌಚಾಲಯ, ಗ್ರಂಥಾಲಯ, ಆಡಿಟೋರಿಯಂಗಳನ್ನು ನಿರ್ಮಾಣ ಮಾಡಿದ್ದೇವು. ರಾಜ್ಯದ ಬಹುತೇಕ ಕಾಲೇಜುಗಳು ಸುಸಜ್ಜಿತ ಕಟ್ಟಡಗಳನ್ನು ಹೊಂದುವಂತೆ ಮಾಡಿದ್ದೇನೆ ಎಂದು ಅವರು ಹೇಳಿದರು.

ಶಿಕ್ಷಣಕ್ಕೆ ಒತ್ತು

ಜಿಪಂ ಸದಸ್ಯರಾಗಿ ಆಯ್ಕೆಯಾದ ದಿನದಿಂದ ಇಲ್ಲಿಯವರೆಗೂ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿದ್ದೇನೆ. ಯಾವುದೇ ಊರಾಗಲೀ, ಯಾವುದೇ ವಿಚಾರವಾಗಲೀ ನಾನು ರಾಜಕೀಯ ಮಾಡಲ್ಲ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಬೇರೆಯವರು ರಾಜಕಾರಣ ಮಾಡುತ್ತಾರೆ. ಆದರೆ ನಾನು ಅದಕ್ಕೆ ತಲೆಹಾಕಲ್ಲ ಎಂದು ಹೇಳಿದರು.

ಕ್ಷೇತ್ರದಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಮೊದಲಿನಿಂದಲೂ ಗಮನಹರಿಸುತ್ತಾ ಬಂದಿದ್ದೇನೆ. ಮಕ್ಕಳ ಕ್ರೀಡಾಂಗಣ,ಆಟದ ಮೈದಾನ, ಶೌಚಾಲಯಗಳು, ಕುಡಿಯುವ ನೀರಿನ ಘಟಕವನ್ನು ಒದಗಿಸಲಾಗುತ್ತಿದೆ. ಈಗ ಶಾಲೆಗಳ ಜಾಗವನ್ನು ರಕ್ಷಣೆ ಮಾಡುವ ಕಡೆಗೆ ಗಮನಹರಿಸಲಾಗಿದೆ ಎಂದು ಭರವಸೆ ನೀಡಿದರು.

ಈ ಸುದ್ದಿಯನ್ನೂ ಓದಿ | Eshwar Khandre: ಕಸ್ತೂರಿ ರಂಗನ್‌ ವರದಿ; ಪರಿಸರ, ಜನಜೀವನ ಹಿತಾಸಕ್ತಿ ರಕ್ಷಣೆಗೆ ಸರ್ಕಾರದ ಕ್ರಮ

ಲಯನ್ ಸಂಸ್ಥೆಯವರು ಸ್ವಯಂಪ್ರೇರಣೆಯಿಂದ ಮಂಡಕಳ್ಳಿ ಶಾಲೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿ ಆಯ್ಕೆ ಮಾಡಿಕೊಂಡಿರುವುದು ಸಂತೋಷದ ವಿಚಾರವಾಗಿದೆ. ಕಾಂಪೌಂಡ್, ಕುಡಿಯುವ ನೀರಿನ ಘಟಕ, ಶೌಚಾಲಯದ ಕಟ್ಟಡದ ಜತೆಗೆ ಮಕ್ಕಳ ಆಟೋಟಕ್ಕೆ ಬೇಕಾದ ಉಪಕರಣಗಳನ್ನು ಒದಗಿಸುತ್ತಿರುವುದರಿಂದ ಮಕ್ಕಳಿಗೂ ಅನುಕೂಲವಾಗಲಿದೆ. ಶಿಕ್ಷಕರು ಮರಗಿಡಗಳನ್ನು ನೆಟ್ಟು ಸುಂದರ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ಗ್ರಾಮದ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮೇಲ್ದರ್ಜೇಗೇರಿಸಲು ಬೇಕಾದ ಕ್ರಮವನ್ನು ಕೈಗೊಳ್ಳಲಾಗುವುದು. ಶಾಲೆಯು ಮಾದರಿಯಾಗಿ ರೂಪುಗೊಂಡರೆ ಆಯ್ಕೆ ಮಾಡಬಹುದು ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Water Supply Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೆ.21ರಂದು ಕಾವೇರಿ ನೀರು ಪೂರೈಕೆಯಾಗದು!

ಈ ಸಂದರ್ಭದಲ್ಲಿ ಡಿಡಿಪಿಐ ಜವರೇಗೌಡ, ಮುಖಂಡರಾದ ಲೋಕೇಶ್, ಬೀರೇಗೌಡ,ರಾಮೇಗೌಡ,ಚಂದ್ರಶೇಖರ್, ಲಯನ್ಸ್ ಸಂಸ್ಥೆಯ ಮಮತಾ, ಸುಬ್ರಹ್ಮಣ್ಯ, ಮೂರ್ತಿ, ಜಯಕುಮಾರ್, ಶ್ರೀನಿವಾಸ್ ಹಾಗೂ ಇತರರು ಹಾಜರಿದ್ದರು.