ಚಿಕ್ಕಬಳ್ಳಾಪುರ: ಕರೋನಾ ಸೋಂಕಿನ ಭೀತಿ ಮರೆತು ಸಾವಿರಾರು ಮಂದಿ ಒಮ್ಮೆಲೆ ನಂದಿ ಬೆಟ್ಟಕ್ಕೆ ಭೇಟಿ ಕೊಟ್ಟದ್ದು, ಸಾಮಾಜಿಕ ಅಂತರ, ಮಾಸ್ಕ್ ಧರಿಸು ವಿಕೆ ನಿಯಮವನ್ನು ಹಲವರು ಪಾಲಿಸದಿರುವುದು ಕರೋನಾ ಸೋಂಕು ಹೆಚ್ಚಳದ ಭೀತಿಯನ್ನು ಮೂಡಿಸಿದೆ. ಹಾಗಾಗಿ, ಇದಕ್ಕೆ ಬ್ರೇಕ್ ಹಾಕಲು ಅಪರ ಜಿಲ್ಲಾಧಿ ಕಾರಿ ಎಚ್.ಅಮರೇಶ್ ಅವರು, ಶನಿವಾರ ಮತ್ತು ಭಾನುವಾರ ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಅನ್ಲಾಕ್ ಶುರುವಾಗುತ್ತಿದ್ದಂತೆ ನಂದಿಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಸೋಂಕನ್ನು ಲೆಕ್ಕಿಸದೆ ಲಗ್ಗೆ ಇಟ್ಟಿದ್ದರು. ಕಳೆದ ಶನಿವಾರ ಮತ್ತು ಭಾನುವಾರ ನಂದಿ ಗಿರಿಧಾಮ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಸೂರ್ಯೋದಯಕ್ಕೂ ಮುನ್ನವೇ ನೂರಾರು ಬೈಕ್ ಮತ್ತು ಕಾರಿನಲ್ಲಿ ನಂದಿ ಹಿಲ್ಸ್ಗೆ ನಾ ಮುಂದು, ತಾ ಮುಂದು ಎಂಬಂತೆ ಬಂದಿದ್ದರು.
ಮುಂದಿನ ಆದೇಶದವರೆಗೂ ಪ್ರತಿ ಶುಕ್ರವಾರ ಸಂಜೆ 6 ರಿಂದ ಸೋಮವಾರ ಬೆಳಗ್ಗೆ 6ರ ವರೆಗೆ ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧ ಹೇರಲಾಗಿದೆ. ವೀಕೆಂಡ್ ಡೇ ಹೊರತುಪಡಿಸಿದಂತೆ ಉಳಿದ ದಿನಗಳಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.