Monday, 16th September 2024

ಪಾಕ್ ಪರ ಘೋಷಣೆ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಯುವ ಮೋರ್ಚಾ ಮುತ್ತಿಗೆ

ಮಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್​ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರು ಗೆಲುವಿನ ಸಂಭ್ರಮದ ನಡುವೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರೋ ಆರೋಪಗಳು ಕೇಳಿ ಬಂದಿದೆ.

ಈ ಘಟನೆ ಸದ್ಯ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಘಟನೆ ಸಂಬಂಧ ಮಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಆಕ್ರೋಶ ಹೊರ ಹಾಕಿದ್ದು ಕಾಂಗ್ರೆಸ್ ಕಚೇರಿ ಮುತ್ತಿಗೆಗೆ ಯತ್ನಿಸಿದ್ದಾರೆ. ಸದ್ಯ ಕೆಲ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದ್ದು ಸ್ಥಳದಲ್ಲಿ ಗಲಾಟೆ ನಡೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ನಡೆದಿದೆ. ಕಾಂಗ್ರೆಸ್ ಕಚೇರಿ ಒಳಗೆ ನುಗ್ಗದಂತೆ ಪೊಲೀಸರು ಮೊದಲೇ ಬ್ಯಾರಿಕೇಡ್ ಅಳವಡಿಸಿದ್ದರು. ಪ್ರತಿಭಟನಾಕಾರರು ಕಚೇರಿ ಬಳಿ ಆಗಮಿಸುವ ಮೊದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾಕ್ ಪರ ಘೋಷಣೆ ಆರೋಪ ಕೇಳಿ ಬರುತ್ತಿದ್ದಂತೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಎಚ್ಚರಿಕೆ ನೀಡಿತ್ತು. ಹೀಗಾಗಿ ಪೊಲೀಸರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭದ್ರತೆ ನೀಡಿದ್ದರು. ಮಂಗಳೂರು ನಗರದ ಮಲ್ಲಿಕಟ್ಟೆ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕದ್ರಿ, ಪಾಂಡೇಶ್ವರ ಠಾಣೆ ಪೊಲೀಸರು ಭದ್ರತೆ ನೀಡಿದ್ದರು. ಎರಡು ಕೆಎಸ್​ಆರ್​ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ಧನ್ಯನಾಯಕ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಇನ್ನು ನಾಸಿರ್ ಹುಸೇನ್‌ರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮುಂದುವರೆದಿದೆ.

ವಿಧಾನಸೌಧದ ಲಾಂಜ್​ನಲ್ಲಿ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಿಡಿದೆದ್ದಿದೆ.

Leave a Reply

Your email address will not be published. Required fields are marked *