ಚಿಕ್ಕಬಳ್ಳಾಪುರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆಗೆ ದೊರೆತ ವ್ಯಾಪಕ ಜನಬೆಂಬಲ ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ ರಾಜಕೀಯ ವಿರೋಧಿಗಳಿಗೆ ಉತ್ತರ ನೀಡಿದೆ ಅವಳಿ ಜಿಲ್ಲೆ ಗಳಲ್ಲಿ ಯಶಸ್ವಿ ಯಾಗಿದ್ದು ಮಾರ್ಚ್ ೨೦ ರವರೆಗೆ ನಡೆಯಲಿರುವ ಯಾತ್ರೆಗೆ ಮಾನಸಿಕ ನೈತಿಕ ಶಕ್ತಿಯನ್ನು ತುಂಬಿದೆ ಎಂದು ಎಚ್.ಡಿ.ಕುಮಾರ ಸ್ವಾಮಿ ಹರ್ಷವ್ಯಕ್ತಪಡಿಸಿದರು.
ತಾಲ್ಲೂಕಿನ ನಂದಿ ಗ್ರಾಮದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಯಾತ್ರೆಯ ವೇಳೆ ಹಲವರು ದು:ಖ ದುಮ್ಮಾನಗಳ ಜತೆಗೆ ಅಹವಾಲು ಹೇಳಿಕೊಂಡಿದ್ದಾರೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಾಲಗಾರರಾಗುವ ವಾತಾವರಣ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ಶಾಲೆಗಳ ಶೀಥಿಲಾವಸ್ಥೆಯಲ್ಲಿವೆ. ಕೆಲ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆಯಿಲ್ಲದೆ ಮಕ್ಕಳ ಆಟೋಗಳ ಮೂಲಕ ಪ್ರಯಾಣ ಮಾಡು ವಂತ ಪರಿಸ್ಥಿತಿ ಇದೆ. ಕಳೆದ ಎರಡು ವರ್ಷಗಳಲ್ಲಿ ೧.೬೨ ಲಕ್ಷ ಮಕ್ಕಳು ಸರ್ಕಾರಿ ಶಾಲೆಗಳಿಂದ ವಿಮುಖರಾಗಿ ಖಾಸಗಿ ಶಾಲೆಗಳತ್ತ ಮುಖಮಾಡಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಸರ್ಕಾರಿ ಶಾಲೆ ಮುಚ್ಚುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಜೆಡಿಎಸ್ ರೈತರು, ಯುವಕರು ಹಾಗೂ ಮಹಿಳೆಯರ ಸಬಲೀಕರಣ ಹಾಗೂ ಸರ್ಕಾರಿ ಶಾಲೆಗಳ ಉಳಿವಿನೊಂದಿಗೆ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪಂಚ ರತ್ನ ಯೋಜನೆ ಪೂರಕ. ಅಲ್ಲದೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿ ಹಾಡಲಿದೆ ಎಂದು ಅಭಿಪ್ರಾಯಪಟ್ಟರು.
ಕೆಲ ಹಳ್ಳಿಗಳಲ್ಲಿ ೩೦-೪೦ ವರ್ಷಗಳಿಂದ ಕೃಷಿ ಮಾಡುತ್ತಿರುವ ದಲಿತರಿಗೆ ಇಂದಿಗೂ ಸಾಗುವಳಿ ಚೀಟಿ ಕೊಟ್ಟಿಲ್ಲ. ಆದರೆ ಸಚಿವರು ಜಿಲ್ಲಾಧಿಕಾರಿ ನಡೆ, ಹಳ್ಳಿ ಕಡೆ ಕಾರ್ಯದಲ್ಲಿ ಸಾವಿರಾರು ನಿವೇಶನ ನೀಡುವುದಾಗಿ ಘೋಷಣೆ ಮಾಡಿರುವುದು ಹಾಸ್ಯಾಸ್ಪದ ವಾಗಿದ್ದು, ಗ್ರಾಮವಾಸ್ತವ್ಯದಲ್ಲಿ ಅಹವಾಲು ಸ್ವೀಕರಿಸಿ ಇದನ್ನು ನೋಡಿ ಎಂದು ಅಧಿಕಾರಿಗಳಿಗೆ ಹೇಳುವುದೇ ವಿಲೇವಾರಿ ಎಂದು ಸಚಿವರು ಭಾವಹಿಸಿರುವಂತಿದೆ. ಅರ್ಜಿಗೆ ಸೂಕ್ತ ಪರಿಹಾರ ನೀಡಿಲ್ಲ ಕೇವಲ ಕಾಟಾಚಾರದ ಕಾರ್ಯಕ್ರಮವಾಗಿದೆ ಎಂದು ಟೀಕಿಸಿದರು.
ಜನಸಂಖ್ಯೆ ಆಧಾರಿತ ಮೀಸಲಾತಿ ಬೇಡ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಗಳ ಕುರಿತು ಪ್ರತಿಕ್ರಿಯಿಸಿ, ಸರ್ಕಾರಗಳು ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನೀಡುವ ಬದಲು ಆಯಾ ಸಮುದಾಯಗಳು ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ಪರಿಗಣಿಸಿ ಮೀಸಲಾತಿ ನೀಡಬೇಕಿದೆ. ಯಾವ ಸಮುದಾಯ ಎಷ್ಟು ಸರ್ಕಾರಿ ನೌಕರಿಯನ್ನು ಗಟ್ಟಿಸಿಕೊಂಡಿವೆ ಎಂಬುದನ್ನೂ ಪರಿಗಣಿಸಬೇಕಿದೆ. ಇತ್ತೀಚಿಗೆ ಪರಿಶಿಷ್ಟರ ಮೀಸಲಾತಿ ಹೆಚ್ಚಿಸಿ ಬೆನ್ನುತಟ್ಟಿಕೊಳ್ಳುತ್ತಿರುವ ಬಿಜೆಪಿ ಮೀಸಲಾತಿ ಹೆಚ್ಚಿಸಲು ಇರುವ ಕಾನೂನು ತೊಡಕು ಸರಿಪಡಿಸಬೇಕಿದೆ. ಇಂದಿಗೂ ಅಲೆಮಾರಿ ಸೇರಿ ಹಲವರಿಗೆ ಮೀಸಲಾತಿ ಸವಲತ್ತು ದೊರೆಯುತ್ತಿಲ್ಲ. ಈ ಬಗ್ಗೆ ಗಮನ ಹರಿಸಿ ಬಡತನ ನಿರ್ಮೂಲನೆಗೆ ಪ್ರಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು.
ನನಗೆ ಯಾರ ಸರ್ಟಿಫಿಕೇಟ್ ಬೇಕಾಗಿಲ್ಲ: ಮಂಡ್ಯ, ಹಾಸನದಲ್ಲಿ ಒಂದಿಷ್ಟು ಕ್ಷೇತ್ರ ಕಳೆದುಕೊಂಡು ಇದೀಗ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎಚ್‌ಡಿಕೆ ಬಂದಿದ್ದಾರೆ ಎಂಬ ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆಯಾಗಿದ್ದು, ನಮ್ಮಲ್ಲಿನ ಕೆಲ ಲೋಪಗಳಿಂದ ಹಿನ್ನಡೆಯಾಗಿದೆ. ಆದರೆ ಈ ಬಾರಿ ೧೧ ಕ್ಷೇತ್ರಗಳಲ್ಲಿ ಪಕ್ಷ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಮುಂದಾಗಿದ್ದಾರೆ. ಈ ಬಗ್ಗೆ ಯಾರ ಸರ್ಟಿಫಿಕೇಟ್ ಬೇಕಾಗಿಲ್ಲ. ಇಲ್ಲಿನ ಜನರ ನಾಡಿಮಿಡಿತ ಗೊತ್ತಿದ್ದು, ಯಾತ್ರೆಯಲ್ಲಿ ಹರಿದು ಬಂದ ಅಭಿಮಾನದ ಅರ್ಥಮಾಡಿಕೊಳ್ಳಬಲ್ಲೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ, ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡರು.