ತುಮಕೂರು: ಯುವಕರಲ್ಲಿ ರಾಷ್ಟ್ರಪ್ರೇಮ ಮೂಡಬೇಕೆಂದು ಶ್ರೀದೇವಿ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದರು.
ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶಿಕ್ಷಣದಿಂದಲೇ ದೇಶದ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ ಮತ್ತು ಉತ್ತಮ ಶಿಕ್ಷಣ ವನ್ನು ನೀಡಲು ನಾವೆಲ್ಲರೂ ಸದಾ ಶ್ರಮಿಸ ಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಹತ್ತು ಹಲವಾರು ಸಮಸ್ಯೆಗಳಿದ್ದವು. ಎಲ್ಲವುಗಳನ್ನು ಎದುರಿಸಿ ಇಂದು ಐದನೇ ರಾಷ್ಟ್ರ ವಾಗಿ ಹೊರ ಹೊಮ್ಮಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಮಾತನಾಡಿ, ಭಾರತ ಯುವ ಪೀಳಿಗೆ ಯನ್ನು ಹೊಂದಿರುವ ರಾಷ್ಟ್ರವಾಗಿದೆ. ಸಾಧನೆಯೆಂಬುದು ಪ್ರತಿಯೊಬ್ಬ ವ್ಯಕ್ತಿಯೂ ಧ್ಯೇಯವಾಗಬೇಕು. ಉತ್ತಮ ನಾಗರೀಕನಾಗಿರಲು ಒಳ್ಳೆಯ ಕನಸುಗಳನ್ನು ಕಾಣಬೇಕು, ಆ ಕನಸುಗಳೇ ಸಾಧನೆಯ ಮೆಟ್ಟಿಲು ಆಗಬೇಕು. ಉತ್ತಮ ಸಮಾಜವನ್ನು ಕಟ್ಟಲು ವಿದ್ಯಾರ್ಥಿಗಳು ಜವಾಬ್ದಾರಿ ಹೊಂದಬೇಕು ಎಂದು ಅರ್ಥಪೂರ್ಣವಾಗಿ ವಿವರಿಸಿದರು.
ಗಡಿಭದ್ರತಾ ಪಡೆಯ ಗಡಿಯೋಧರಾದ ಎಚ್.ಜಿ.ಪರಮೇಶ್ ಮಾತನಾಡಿ, ಉತ್ತಮ ಬೃಹತ್ ರಾಷ್ಟ್ರ ನಿರ್ಮಿಸಲು ನಾವೆಲ್ಲರೂ ಸದಾ ಶ್ರಮಿಸಬೇಕು. ದೇಶ ಅಭಿವೃದ್ಧಿ ಹೊಂದಲು ಅನೇಕ ಮಹನೀಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಭಾರತವನ್ನು ನಿರ್ಮಿಸಲು ಕನಸನ್ನು ಹೊಂದಬೇಕು ಗುರುವಿಗೆ ಭಕ್ತಿ ತೋರಿಸುತ್ತಾ ಸರ್ವರಿಗೂ ದೇಶ ಭಕ್ತಿಯನ್ನು ಮೆರೆಯಬೇಕು ಎಂದು ತಿಳಿಸಿದರು.
ಡಾ. ರಮಣ್ ಎಂ ಹುಲಿನಾಯ್ಕರ್ ಮಾತನಾಡುತ್ತಾ, ದೇಶ ಸ್ವಾತಂತ್ರ್ಯ ಪಡೆಯಲು ನಡೆದ ತ್ಯಾಗ ಬಲಿದಾನಗಳ ಬಗ್ಗೆ ಸವಿಸ್ತಾರ ವಾಗಿ ಮಾತನಾಡುತ್ತಾ ತ್ರಿವರ್ಣ ಧ್ವಜದ ಬಣ್ಣಗಳನ್ನು ಹಾಗೂ ಅವುಗಳ ಉದ್ದೇಶವನ್ನು ಯುವಜನರಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್, ಶ್ರೀದೇವಿ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ನರೇಂದ್ರವಿಶ್ವನಾಥ್, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಲ್.ಹರೇಂದ್ರಕುಮಾರ್, ಶ್ರೀದೇವಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಕೆ.ಮೋಹನ್‌ಕುಮಾರ್, ಶ್ರೀದೇವಿ ಕಾಲೇಜಿನ ಆಡಳಿತಾಧಿಕಾರಿ ಟಿ.ವಿ.ಬ್ರಹ್ಮದೇವಯ್ಯ, ದೈಹಿಕ ಶಿಕ್ಷಕರಾದ ರಾಘವೇಂದ್ರ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಪ್ರಾಂಶುಪಾಲರು ಮತ್ತು ಬೋಧಕ- ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.