Friday, 13th December 2024

ಹಣ ನೀಡದಿದ್ದರೆ ಲೋಕಾಯುಕ್ತಕ್ಕೆ ದೂರು: ರಕ್ಷಣೆ ನೀಡುವಂತೆ ಪಿಡಿಒಗಳು ಆಗ್ರಹ

ತುಮಕೂರು: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಮೇಲೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವ ಪ್ರಕರಣಗಳು ನಡೆಯುತ್ತಿದ್ದು, ಸೂಕ್ತ ರಕ್ಷಣೆ ಒದಗಿಸ ಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾ ಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆರ್. ನಾಗರಾಜು ನೇತೃತ್ವದಲ್ಲಿ ಪಿಡಿಒಗಳು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆರ್. ನಾಗರಾಜು, ಪಂಚಾಯ್ತಿಗಳಲ್ಲಿರುವ ಹಾಲಿ ಮತ್ತು ಮಾಜಿ ಸದಸ್ಯರು, ಅಧ್ಯಕ್ಷರು, ಸಾರ್ವಜನಿಕರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯನ್ನು ಅವ್ಯಾಚ್ಯವಾಗಿ ನಿಂದಿಸುವಂತಹ ಮತ್ತು ಅವರ ಮೇಲೆ ಹಲ್ಲೆಗಳನ್ನು ಮಾಡಿ, ಸುಖಾ ಸುಮ್ಮನೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವಂತಹ ಕೆಲಸಗಳು ನಡೆಯುತ್ತಿವೆ ಎಂದರು.
ನಕಲಿ ಪತ್ರಕರ್ತರ ಹಾವಳಿ: ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಮುದ್ರಣಗೊಳ್ಳದ ಪತ್ರಿಕೆಯ ಹೆಸರಿನಲ್ಲಿ ಕೆಲವು ಪತ್ರಕರ್ತರು ಚಂದಾದಾರರಾಗಿ ಎಂದು ಹೇಳಿ ಬರುತ್ತಿದ್ದು, ಇದಕ್ಕೆ ಒಪ್ಪದಿದ್ದಾಗ ಅವರ ಮೇಲೆ ಆರ್‌ಟಿಐ ಹಾಕಿ ಲೋಕಾಯುಕ್ತಕ್ಕೆ ದೂರು ನೀಡಿ ಮಾನಸಿಕವಾಗಿ ಮನೋಸ್ಥೈರ್ಯ  ಕುಗ್ಗಿಸುವಂತ ಕೆಲಸಗಳನ್ನು ಮಾಡುತ್ತಿದ್ದಾರೆ. ಇದರಿಂದ ಪಂಚಾಯ್ತಿ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದು, ಸೂಕ್ತ ರಕ್ಷಣೆ ಕಲ್ಪಿಸಬೇಕೆಂದು ಮನವಿ ಮಾಡಿದರು.
ಇತ್ತೀಚಿಗೆ 2022 ಸೆ.30 ರಂದು ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಗೋಪಾಲದೇವರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಶಿವರಾಮಯ್ಯ ಎಂಬುವರ ಮೇಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಣ್ಣ ಎಂಬುವವರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಗ್ರಾ.ಪಂ. ಆವರಣದಲ್ಲಿಯೇ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಈ ವಿಚಾರವಾಗಿ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ರೀತಿ 15 ದಿನಗಳ ಹಿಂದೆ ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಹಳ್ಳಿ ಗ್ರಾಮದ ಶ್ರೀನಿವಾಸ ಎಂಬುವವರು ಕಚೇರಿಯ ಕಂಪ್ಯೂಟರ್ ಅನ್ನು ಹಾನಿಗೊಳಿಸಿ ಸಿಬ್ಬಂದಿ, ಸದಸ್ಯರೊಂದಿಗೆ ದುವರ್ತನೆ ತೋರಿದ್ದಾರೆ .ಈ ರೀತಿಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಮತ್ತಿತರ ಸಿಬ್ಬಂದಿಗಳು ಕೆಲಸ ನಿರ್ವಹಿಸಲು ಕಷ್ಟಕರವಾಗುತ್ತಿದೆ ಎಂದು ಹೇಳಿದರು.
ರಾಜಕಾರಣಿಗಳ ದಬ್ಬಾಳಿಕೆ: ಕೆಲವರು ರಾಜಕೀಯ ಪಕ್ಷಗಳ ಹೆಸರಿನಲ್ಲಿ ಅನಗತ್ಯವಾಗಿ ಕಚೇರಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದು, ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಗಳನ್ನು ಸಲ್ಲಿಸಿ ಆ ದಾಖಲೆಗಳನ್ನು ಲೋಕಾಯುಕ್ತದಲ್ಲಿ ಪ್ರಕರಣಗಳನ್ನು ದಾಖಲಿಸುವುದು ಸಾಕಷ್ಟು ಗ್ರಾಮ ಪಂಚಾಯಿತಿಗಳಲ್ಲಿಯೂ ನಡೆಯುತ್ತಿದೆ. ಇಂತಹ ಘಟನೆಗಳಿಂದ ಕಚೇರಿಗಳಲ್ಲಿ ಅಧಿಕಾರಿ, ಸಿಬ್ಬಂದಿಗಳು ಕಾರ್ಯನಿರ್ವಹಿಸಲು ಕಷ್ಟವಾಗಿದ್ದು ಪಿಡಿಒಗಳಿಗೆ ಅನಾರೋಗ್ಯ, ಮಾನಸಿಕ ಒತ್ತಡದಿಂದ ಕೆಲಸ ನಿರ್ವಹಿಸು ವಂತೆ ಆಗಿದೆ. ಇದನ್ನೆಲ್ಲಾ ಪರಿಗಣಿಸಿ ನಮಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಭಣ್ಣ, ಲೋಕೇಶ್, ಟಿ.ಎನ್.ಉಷಾ, ಡಿ. ಷಂಷೀರ್, ಎನ್.ಶಿವರಾಮಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.