Friday, 20th September 2024

ಪಾದಚಾರಿಗಳ‌ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚನೆ 

ತುಮಕೂರು: ನಗರದ ಮಂಡಿಪೇಟೆಗೆ ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ ಭೇಟಿ ನೀಡಿ ಅಂಗಡಿಗಳ ಮುಂಭಾಗದ ಫುಟ್‌ಪಾತ್‌ನಲ್ಲಿ ಇಡಲಾ ಗಿದ್ದ ವಸ್ತುಗಳನ್ನು ತೆರವುಗೊಳಿಸಿ ಪಾದಚಾರಿಗಳ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.
ಮಂಡಿಪೇಟೆ ಮುಖ್ಯ ರಸ್ತೆಯಲ್ಲಿರುವ ಅಂಗಡಿ ಮಳಿಗೆಗಳ ಮುಂಭಾಗದಲ್ಲಿ ವರ್ತಕರುಗಳು ತಮ್ಮ ಅಂಗಡಿ ಮುಂಗಟ್ಟಿನ ಸಾಮಗ್ರಿಗಳು ಇಟ್ಟು ವ್ಯಾಪಾರ ವಹಿವಾಟು ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿದ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯೊ0ದಿಗೆ ಭೇಟಿ ನೀಡಿ ಆಯುಕ್ತೆ ಅಶ್ವಿಜಾ ಅವರು ಅಂಗಡಿಗಳ ಮುಂಭಾಗದ ಪಾದಚಾರಿ ರಸ್ತೆಯಲ್ಲಿ ಇಟ್ಟಿದ್ದ ಅಂಗಡಿಯ ಸಾಮಗ್ರಿಗಳನ್ನು ಖುದ್ದು ವೀಕ್ಷಿಸಿ, ಕೂಡಲೇ ಫುಟ್‌ಪಾತ್ ಮೇಲೆ ಇಡಲಾಗಿರುವ ವಸ್ತುಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಪಾಲಿಕೆಯ ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಂಗಡಿಗಳ ಮುಂಭಾಗದಲ್ಲಿ ಫುಟ್‌ಪಾತ್ ನಿರ್ಮಿಸಿರುವುದು ಪಾದಚಾರಿಗಳ ಸುಗಮ ಓಡಾಟಕ್ಕೆ, ಅಂಗಡಿಗಳ ಮುಂಭಾಗದಲ್ಲಿ ವಸ್ತುಗಳನ್ನು ಇಟ್ಟು ಕೊಳ್ಳುತ್ತಿರುವುದರಿಂದ ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇದರಿಂದ ಅಪಘಾತಗಳು ಸಹ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಇನ್ನು ಮುಂದೆ ಯಾವ ವರ್ತಕರು ಸಹ ಅಂಗಡಿಗಳ ಮುಂಭಾಗದ ಫುಟ್‌ಪಾತ್ ಮೇಲೆ ಅಂಗಡಿಯ ಸಾಮಗ್ರಿಗಳನ್ನು ಇಟ್ಟು ವ್ಯಾಪಾರ ಮಾಡಬಾರದು ಎಂದು ತಿಳಿಸಿದರು.
ಅಂಗಡಿಗಳ ಮುಂಭಾಗಲ್ಲಿ ಶೀಟುಗಳನ್ನು ಫುಟ್‌ಪಾತ್‌ಗೆ ಸರಿ ಸಮಾನಾಗಿ ಚಾಚಿಕೊಳ್ಳುವಂತೆ ಹಾಕಿರುವುದು ಗಮನಕ್ಕೆ ಬಂದಿದೆ. ಇದು ಕೇವಲ ಮಂಡಿಪೇಟೆ ಮಾತ್ರವಲ್ಲ, ಎಂ.ಜಿ. ರಸ್ತೆ, ಜೆ.ಸಿ. ರಸ್ತೆ, ಅಶೋಕ ರಸ್ತೆ, ಬಿ.ಹೆಚ್. ರಸ್ತೆ, ಎಸ್.ಎಸ್.ಪುರಂ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್ ಒತ್ತುವರಿಯಾಗುತ್ತಿದೆ. ಕೂಡಲೇ ವರ್ತಕರುಗಳು ಫುಟ್‌ಪಾತ್ ಮೇಲೆ ಇಟ್ಟಿರುವ ವಸ್ತುಗಳನ್ನು ತೆರವುಗೊಳಿಸಿ ತಮ್ಮ ಅಂಗಡಿ ವ್ಯಾಪ್ತಿ ಯೊಳಗೆ ವ್ಯಾಪರ ಮಾಡಬೇಕು. ಇಲ್ಲದಿದ್ದರೆ ಪಾಲಿಕೆ ವತಿಯಿಂದ ತೆರವುಗೊಳಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.