Friday, 13th December 2024

Ph.D: ಗಣಿತಶಾಸ್ತ್ರದ ವಿಷಯದಲ್ಲಿ ವಿ.ಪ್ರಿಯಾಂಕ ಪಿಎಚ್‌ಡಿ ಪದವಿ ಸಾಧನೆ

ಬಾಗೇಪಲ್ಲಿ: ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿರುವ ಎಲ್‌ಐಸಿ ಎಜೆಂಟ್‌ರಾದ ವೆಂಕಟರಾಮಪ್ಪ ಹಾಗೂ ವನಜಮ್ಮ ಅವರ ಪುತ್ರಿ ವಿ.ಪ್ರಿಯಾಂಕ (V Priyanka) ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಗಣಿತ ಶಾಸ್ತ್ರ(Mathematics) ದ ವಿಷಯ ದಲ್ಲಿ ಪಿಎಚ್‌ಡಿ(Ph.D) ಪದವಿ ಪಡೆದು ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.

ಮೂಲತಃ ಗೂಳೂರು ಗ್ರಾಮದವರಾದ ವೆಂಕಟರಾಮಪ್ಪರವರು ೨೦ ವರ್ಷಗಳಿಂದ ಎಲ್‌ಐಸಿ ಏಜೆಂಟರಾಗಿದ್ದಾರೆ. ಪಟ್ಟಣದ ವರದಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ೧೫ ವರ್ಷಗಳಿಂದ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ವೆಂಕಟರಾಮಪ್ಪ ಹಾಗೂ ವನಜಮ್ಮರವರ ಪುತ್ರಿ ವಿ.ಪ್ರಿಯಾಂಕರವರು ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ವಿಶ್ವವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕಿ ಡಾ.ವಿ.ಹುಸ್ನಾ ಮಾರ್ಗದರ್ಶನದಲ್ಲಿ, “ಸಮ್ ಇನ್ವೆಸ್ಟಿಗೇಷನ್ ಆನ್ ಡಿಫರೆನ್ಸ್ ಪಾಲಿನೋಮೇಲ್ಸ್ ಆಫ್ ಎನ್‌ ಕ್ವೈರ್‌ ಅಂಡ್ ಮೈಕ್ರೋಪರ‍್ಮಿಕ್ ಫಂಕ್ಷನ್ಸ್’ ಎಂಬ ವಿಷಯದ ಮೇಲೆ ವಿ.ಪ್ರಿಯಾಂಕ ಅಧ್ಯಯನ ಮಾಡಿ ಪಿಎಚ್‌ಡಿ ಪಡೆದಿದ್ದಾರೆ.

ಆಗಸ್ಟ್ ತಿಂಗಳಿನ ೨೫ ರಂದು ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಆವರಣದಲ್ಲಿ ವಿ.ಪ್ರಿಯಾಂಕರವರಿಗೆ, ವಿಶ್ವವಿದ್ಯಾಲಯದ ಡೀನ್ ಡಾ.ಸಿ.ಎಸ್.ರಮೇಶ್, ಗಣಿತಶಾಸ್ತ್ರ ವಿಷಯದ ಹಿರಿಯ ಸಹಾಯಕ ಪ್ರಾಧ್ಯಾಪಕಿ ಡಾ.ವಿ. ಹುಸ್ನಾ, ಮುಖ್ಯಸ್ಥ ಡಾ.ಎಸ್.ಆರ್ ಸುಧೀಂದ್ರ, ಪ್ರಾಧ್ಯಾಪಕ ಡಾ.ಹರಿಣಾ ಪಂಡಿತ್ ಅವರು ಪಿಎಚ್‌ಡಿ ಪದವಿ ಪ್ರಮಾಣ ಪತ್ರ ನೀಡಿ ಶಾಲು ಹೊದಿಸಿ ಗೌರವಿಸಿದ್ದಾರೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗಣಿತ ವಿಷಯದ ಬಗ್ಗೆ ದೂರ ಇರುವ ಸಂಧರ್ಭದಲ್ಲಿ, ಗಣಿತಶಾಸ್ತ್ರದ ವಿಷಯದಲ್ಲಿ ವಿ.ಪ್ರಿಯಾಂಕ, ಇಷ್ಟಪಟ್ಟು ಅಧ್ಯಯನ ಮಾಡಿ ಪಿಎಚ್‌ಡಿ ಪದವಿ ಸಾಧಿಸಿ ಇತರರರಿಗೆ ಮಾದರಿಯಾಗಿದ್ದಾರೆ.

“ನಮ್ಮ ೪ ಮಂದಿ ಮಕ್ಕಳಿಗೂ ಕೂಡ ಸ್ನಾತಕೋತ್ತರ ಪದವಿ ಮಾಡಿಸಲಾಗಿದೆ. ಕಷ್ಟಪಟ್ಟು ಓದದೇ, ಇಷ್ಟಪಟ್ಟು ಓದಿರುವುದರಿಂದ, ಪ್ರಿಯಾಂಕ ಗಣಿತಶಾಸ್ತ್ರದ ವಿಷಯದಲ್ಲಿ ಪಿಎಚ್‌ಡಿ ಪಡೆಯಲು ಸಾಧ್ಯವಾಗಿದೆ. ಈ ಸಾಧನೆ ಕುಟುಂಬಕ್ಕೆಷ್ಟೇ ಅಲ್ಲದೆ ತಾಲ್ಲೂಕಿಗೂ ಕೀರ್ತಿ ತಂದಿದ್ದಾಳೆ ” ಎಂಬುದು ಎಲ್‌ಐಸಿ ಏಜೆಂಟ್ ಆದ ತಂದೆ ವೆಂಕಟ ರಾಮಪ್ಪ ಅವರ ಅನಿಸಿಕೆ.

“ವಿದ್ಯಾರ್ಥಿ ದೆಸೆಯಿಂದಲೇ ಗಣಿತಶಾಸ್ತ್ರ ವಿಷಯ ನನಗೆ ತುಂಬಾ ಇಷ್ಟ. ಇದರಿಂದ ಗಣಿತ ವಿಷಯದಲ್ಲಿ ಪಿಎಚ್ ಡಿ ಮಾಡಿ, ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕಿ ಆಗಬೇಕು ಎಂದು ಇಷ್ಟ ಪಟ್ಟು ಗಣಿತ ವಿಷಯವನ್ನು ಅಧ್ಯಯನ ಮಾಡಿದೆ. ಶ್ರಮಕ್ಕೆ ಪ್ರತಿ ಫಲ ಸಿಕ್ಕಿದೆ. ಪಿಎಚ್‌ಡಿ ಪದವಿ ಪಡೆದಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳಲ್ಲಿ ಗಣಿತ ವಿಷಯದ ಬಗ್ಗೆ ಭಯ ಹೋಗಲಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಪಿಎಚ್ ಡಿ ಪದವಿ ಪಡೆದ ವಿ.ಪ್ರಿಯಾಂಕ ತಿಳಿಸಿದ್ದಾರೆ.