Saturday, 14th December 2024

ಬೆಂಗಳೂರಿನಲ್ಲಿ ಜು.16 ರಂದು ದಿವ್ಯಾಂಗರ ಅಂಗ ಮಾಪನ ಶಿಬಿರ: ಸಚಿವ ಬಿ. ನಾಗೇಂದ್ರ ಭಾಗಿ

ನಾರಾಯಣ್‌ ಸೇವಾ ಸಂಸ್ಥಾನ್‌ ನಿಂದ ಒಂದು ಸಾವಿರ ಮಂದಿಗೆ ಉಚಿತ ಅಂಗಾಂಗ ಜೋಡಣೆ

ಬೆಂಗಳೂರು: ಉದಯ್‌ ಪುರದ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಸ್ವಯಂ ಸೇವಾ ಸಂಸ್ಥೆ ನಾರಾಯಣ್‌ ಸೇವಾ ಸಂಸ್ಥಾನ್‌ ನಿಂದ ಜು.16 ರಂದು ಬೆಂಗಳೂರಿನಲ್ಲಿ ದಿವ್ಯಾಂಗರಿಗೆ ಹೊಂದಿಕೆಯಾಗುವಂತೆ ಅಂಗಾಂಗ ಜೋಡಣೆಗಾಗಿ ಅಂಗಾಂಗ ಮಾಪನ ಶಿಬಿರ ಆಯೋ ಜಿಸಲಾಗಿದೆ. ವಿಶೇಷವಾಗಿ ಕರ್ನಾಟಕದ ಜನರಿಗಾಗಿ ಈ ಬೃಹತ್‌ ಶಿಬಿರ ಏರ್ಪಡಿಸಿದ್ದು, ಒಂದು ಸಾವಿರ ಮಂದಿಗೆ ಉಚಿತ ಅಂಗಾಂಗ ಜೋಡಣೆ ಮೂಲಕ ಹೊಸ ಬದುಕು ನೀಡಲು ಸಂಸ್ಥೆ ಸಜ್ಜಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣ್‌ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಭಗವಾನ್‌ ಪ್ರಸಾದ್‌ ಗೌರ್‌, ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್, ಆಚಾರ್ಯ ವಿಮಲ್ ಸಾಗರ್ ಮಹಾರಾಜ್ ಅವರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಅರ್ಹ ಫಲಾನುಭವಿಗಳಿಗೆ ಹೊಂದಿಕೆಯಾ ಗುವಂತೆ ಕೃತಕ ಅಂಗಾಂಗಗಳ ಅಳತೆ ತೆಗೆದುಕೊಂಡು ನಂತರ ಸಿದ್ಧಪಡಿಸಿ ಇನ್ನೊಂದು ತಿಂಗಳಲ್ಲಿ ನಡೆಯಲಿರುವ ಬೃಹತ್‌ ಶಿಬಿರದಲ್ಲಿ ಅಳವಡಿಸಲಾಗುವುದು ಎಂದರು.

ಕಳೆದ 38 ವರ್ಷಗಳಿಂದ ಅಪಘಾತ ಮತ್ತಿತರ ಅವಘಡಗಳಲ್ಲಿ ಅಂಗಾಂಗ ಕಳೆದುಕೊಂಡವರಿಗೆ ಕೃತಕ ಅಂಗಾಂಗ ಜೋಡಣೆ ಮಾಡುತ್ತಿದ್ದು, ಬೆಂಗಳೂರಿನ ವಿವಿಪುರದಲ್ಲಿರುವ ಅರಸೋಜಿ ರಾವ್‌ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿಶೇಷ ಚೇತನರಿಗೆ ಪರಿಣಿತ ವೈದ್ಯರು ಅಳವಡಿಕೆಮಾಡಲಿರುವ ಅಂಗಾಂಗಗಳ ಅಳತೆ ತೆಗೆದುಕೊಳ್ಳ ಲಿದ್ದಾರೆ. ಇದು ನಾರಾಯಣ್‌ ಸೇವಾ ಸಂಸ್ಥಾನ್‌ ನ 988 ನೇ ಶಿಬಿರವಾಗಿದ್ದು, ಶೀಘ್ರದಲ್ಲೇ ಈ ಸಂಖ್ಯೆ ಸಾವಿರದ ಗಡಿ ದಾಟಲಿದೆ ಎಂದರು.

ನಾರಾಯಣ್‌ ಸೇವಾ ಸಂಸ್ಥಾನ್‌ ನ ವಕ್ತಾರ ರಜತ್‌ ಗೌರ್‌ ಮಾತನಾಡಿ,  ಸಂಸ್ಥೆಯ ಅನುಭವಿ ಮೂಳೆ ತಜ್ಞರು, ಪ್ರಾಸ್ತೆಟಿಕ್ ವೈದ್ಯರ ತಂಡದಿಂದ ವಿಕಲಚೇತನರಿಗಾಗಿ ಆರೈಕೆ ಜೊತೆಗೆ ಅಂಗಾಂಗ ಅಳವಡಿಸಲು ನೆರವು ನೀಡಲಾಗುವುದು. ರೋಗಿಗಳು ತಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಹಗುರ ಮತ್ತು ದೀರ್ಘಕಾಲ ಬಾಳಿಕೆ ಬರುವ ಕೃತಕ ಅಂಗಾಂಗಳನ್ನು ತಯಾರಿಸಿ ಅಳವಡಿಸಲಾಗುವುದು ಎಂದರು.

ಶಿಬಿರದ ಸಮನ್ವಯಕಾರ ರೋಹಿತ್‌ ತಿವಾರಿ ಮಾತನಾಡಿ, ಫಲಾನುಭವಿಗಳು ಶಿಬಿರಕ್ಕೆ ಆಧಾರ್‌ ಕಾರ್ಡ್‌, ವಿಕಲಚೇತನ ಇಲಾಖೆ ನೀಡಿರುವ ಪ್ರಮಾಣ ಪತ್ರ, ತಮ್ಮ ಅಂಗಾಂಗ ನ್ಯೂನತೆ ಪ್ರತಿಬಿಂಬಿಸುವ ಎರಡು ಭಾವಚಿತ್ರ ತರಬೇಕು. ಶಿಬಿರದಲ್ಲಿ ಉಚಿತ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಮಾಧ್ಯಮ ಸಮನ್ವಯಕಾರರಾದ ಬಿ.ವಿ ಚಂದ್ರಶೇಖರಯ್ಯ ಮಾತನಾಡಿ, ನಾರಾಯಣ್ ಸೇವಾ ಸಂಸ್ಥಾನ್ ಇಡೀ ದೇಶದಲ್ಲಿ ಮಾನವೀಯ ಸೇವೆ ಸಲ್ಲಿಸುತ್ತಿದ್ದು, ಕೃತಕ ಕೈ ಕಾಲು, ಅಂಗಾಂಗಳನ್ನು ಜೋಡಿಸುವ ಮೂಲಕ ದಿವ್ಯಾಂಗರದಲ್ಲಿ ಹೊಸ ಆಶಾ ಕಿರಣ ಮೂಡಿಸಿದೆ ಎಂದರು.