ತುಮಕೂರು: ಪೌಷ್ಟಿಕ ಆಹಾರ ಸೇವಿಸುವುದರಿಂದ ದೇಹದ ಆರೋಗ್ಯ ಉತ್ತಮವಾಗಿರುತ್ತದೆ. ರಕ್ತದಾನ ಮಾಡಿ ಪ್ರಾಣ ಉಳಿಸುವ ಅರ್ಹ ನಾಗರಿಕ ರಾಗುತ್ತೇವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಯುವ ರೆಡ್‌ಕ್ರಾಸ್ ಘಟಕವು ತುಮಕೂರಿನ ಎಚ್.ಡಿ.ಎಫ್.ಸಿ ಬ್ಯಾಂಕ್ ಇವರ ಸಹಯೋಗದೊಂದಿಗೆ ಆಯೋಜಿ ಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಾರೀರಿಕ ಬೆಳವಣಿಗೆಗಾಗಿ ಆಹಾರ, ಮಾನಸಿಕ ಸದೃಢತೆಗಾಗಿ ಯೋಗ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸುತ್ತಿದ್ದಾರೆ. ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುವವರು ಎಂದಿಗೂ ಅಮರರಾಗಿರುತ್ತಾರೆ ಎಂದರು.
ವಿವಿ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಶ್ರೀನಿವಾಸ ಎಸ್. ಮಾತನಾಡಿ, ಮನುಷ್ಯನಿಗೆ ಬಹಳಷ್ಟು ಅಗತ್ಯಗಳಿರು ತ್ತವೆ. ಮನಃಪೂರ್ವಕವಾಗಿ ತೃಪ್ತಿಪಡಿಸುವುದು ಆಹಾರ ಮಾತ್ರ. ಗುಣಮಟ್ಟದ ಆಹಾರ ಸೇವನೆ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದು ತಿಳಿಸಿದರು.
ರಕ್ತದಾನ ಶಿಬಿರದಲ್ಲಿ ಒಟ್ಟಾರೆಯಾಗಿ 100ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಯಿತು.
ವಿವಿ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ. ಮುಕುಂದಪ್ಪ ಬಿ. ಎಲ್., ಯುವ ರೆಡ್‌ಕ್ರಾಸ್ ಘಟಕದ ಸಮನ್ವಯಾಧಿ ಕಾರಿ ಡಾ. ಪೂರ್ಣಿಮಾ ಡಿ., ಎಚ್.ಡಿ.ಎಫ್.ಸಿ ಬ್ಯಾಂಕ್‌ನ ಬ್ರಾಂಚ್ ಆಪರೇಷನ್ ಮ್ಯಾನೇಜರ್ ವಿಜಯ್ ಕುಮಾರ್, ವಿಶ್ವನಾಥ್ ಉಪಸ್ಥಿತರಿದ್ದರು.