ತುಮಕೂರು: ರಾಜ-ಮಹಾರಾಜರ ಕಾಲದಲ್ಲಿ ವಿದ್ವಾಂಸರು ಮತ್ತು ಕಲಾವಿದರಿಗೆ ಆಸ್ಥಾನದಲ್ಲಿ ಮಾತ್ರ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಇತ್ತು, ಇಂದು ಎಲ್ಲ ವರ್ಗದ ಜನರಿಗೂ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಮುಕ್ತ ವೇದಿಕೆಯನ್ನು ಪ್ರಜಾಪ್ರಭುತ್ವ ಕಲ್ಪಿಸಿದೆ ಎಂದು ಪಿಯು ಇಲಾಖೆ ಉಪನಿರ್ದೇಶಕ ಗಂಗಾಧರ್ ತಿಳಿಸಿದರು.
ನಗರದ ಎಂಪ್ರೆಸ್ ಕಾಲೇಜಿನ ಆಡಿಟೋರಿಯಂನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ವಿಭಾ ಗೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಉಚಿತ ಲ್ಯಾಪ್‌ಟ್ಯಾಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹೊರತರಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವೇದಿಕೆ ಕಲ್ಪಿಸಲಾಗಿದೆ, ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಮುಖ್ಯ, ಇಲಾಖೆ ನೀಡಿರುವ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊ ಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ಯಶಸ್ವಿ ಯಾಗಿ ಪ್ರದರ್ಶಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂಪ್ರೆಸ್ ಕಾಲೇಜಿನ ಪ್ರಾಂಶುಪಾಲ ಷಣ್ಮುಖಪ್ಪ ಅವರು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಪ್ರಾರಂಭಿಸಿರುವ ಉಚಿತ ಲ್ಯಾಪ್‌ಟ್ಯಾಪ್ ವಿತರಣೆಯನ್ನು ತುಮಕೂರು ಜಿಲ್ಲೆಯಲ್ಲಿ ೨೦೨೧-೨೨ರ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪರಿಶಿಷ್ಟ ಜಾತಿ ಮತ್ತು ಪಂಗಡದ ೨೪ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದರು.
ಅಕ್ಷರ ಜ್ಞಾನದಿಂದ ಮಾತ್ರ ವೈಯಕ್ತಿಕ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಅರಿತು ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ತೇಜನ ಪಡೆಯುವುದರೊಂದಿಗೆ ತಮ್ಮಲ್ಲಿರುವ ಸುಪ್ತ ಪ್ರತಿಭೆ ವೇದಿಕೆ ಒದಗಿಸಲು ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗು ತ್ತಿದೆ. ಈಗಾಗಲೇ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾಗಿರುವ ೧೦ ಜಿಲ್ಲೆಯ ವಿದ್ಯಾರ್ಥಿಗಳು ತುಮಕೂರು ನಗರ ದಲ್ಲಿ ನಡೆಯುತ್ತಿರುವ ವಿಭಾಗಮಟ್ಟದ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು.
ವ್ಯಕ್ತಿತ್ವ ವಿಕಸನದಲ್ಲಿ ಕಲಿಕೆಯೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳು ಮುಖ್ಯವಾಗುತ್ತವೆ, ಈ ನಿಟ್ಟಿನಲ್ಲಿ ಉಪನ್ಯಾಸಕರು, ಪೋಷಕರು ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸಬೇಕು, ಪ್ರೋತ್ಸಾಹ ನೀಡಿದರೆ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬಹುದಾಗಿದೆ, ಭಾಗವಹಿಸುವ ೪೮೦ ಮಕ್ಕಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳು ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಕಾಲೇಜಿಗೆ ಹಾಗೂ ಜಿಲ್ಲೆಗೆ ಹೆಸರು ತರಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರ ಸಂಘದ ಅಧ್ಯಕ್ಷ ಲಿಂಗದೇವರು, ಉಪನ್ಯಾಸಕರ ಸಂಘದ ಪದಾಧಿಕಾರಿ ಮಹಾಲಿಂಗೇಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಪಿ.ಜೆ.ಜಯಶೀಲ, ದೈಹಿಕ ಉಪನ್ಯಾಸಕ ಸಂಘದ ಅಧ್ಯಕ್ಷ ಬಸವರಾಜು, ಎಂಪ್ರೆಸ್ ಎಸ್‌ಡಿಎಂಸಿ ಉಪಾಧ್ಯಕ್ಷೆ ರಾಧಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅಜಯ್‌ಕುಮಾರ್, ಉಪನ್ಯಾಸಕರಾದ ಜ್ಯೋತಿಪ್ರಕಾಶ್, ಅಜಯ್‌ಕುಮಾರ್, ಸದಾಶಿವಯ್ಯ ಸೇರಿದಂತೆ ಕಾಲೇಜು ಉಪನ್ಯಾಸಕರು ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಚಟುವಟಿಕೆಯ ಸ್ಪರ್ಧೆಗಳು ನಡೆದವು.