Wednesday, 9th October 2024

ಶೇಷಾದ್ರಿಪುರಂ ಕಾಲೇಜಿನಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ಆಚರಣೆ

ತುಮಕೂರು: ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಭಾರತ ಸೇವಾದಳ ಅಭಿಮಾನಿ ಬಳಗ ಬೆಂಗಳೂರು, ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರ ಮತ್ತು ಎನ್ ಎಸ್ ಎಸ್ ಸಂಯುಕ್ತ ಆಶ್ರಯದಲ್ಲಿ ಕ್ವಿಟ್‌ ಇಂಡಿಯಾ ಚಳವಳಿಯ 81 ನೇ ವರ್ಷಾಚರಣೆಯನ್ನು ಆಯೋಜಿಸಲಾಗಿತ್ತು.
ಕ್ರೀಡಾ ಭಾರತಿ ಮೈದಾನದಲ್ಲಿ ಗಣ್ಯರು ಧ್ವಜವಂದನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾ ಯಿತು. ಈ ಸಂದರ್ಭದಲ್ಲಿ ಭಾರತ ಸೇವಾದಳ ಅಭಿಮಾನಿ ಬಳಗದ ಅಧ್ಯಕ್ಷ ಡಿ.ಎಫ್.‌ ಹಳ್ಳಪ್ಪ ಧ್ವಜಾರೋಹ ಣದ ಸಂದರ್ಭದಲ್ಲಿ ಅನುಸರಿಸಬೇಕಾದ ನೀತಿ ನಿಯಮಗಳು ಮತ್ತು ಧ್ವಜಸಂಹಿತೆಯ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ನಂತರ ಶೇಷಾದ್ರಿಪುರಂ ಕಾಲೇಜಿನವರೆಗೆ ವಿದ್ಯಾರ್ಥಿಗಳಿಂದ ಜಾಥಾ ನಡೆಯಿತು.
ಕಾರ್ಯಕ್ರಮದ ಔಚಿತ್ಯವನ್ನು ಕುರಿತು ಭಾರತ ಸೇವಾದಳದ ಖಜಾಂಚಿ ಎಚ್. ಎಸ್. ಕಾಶಿನಕುಂಟೆ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಜನ್ಮ ನೀಡಿದ ತಾಯಿ ಮತ್ತು ಹುಟ್ಟಿದ ಮಣ್ಣನ್ನು ಎಂದಿಗೂ ಪೂಜ್ಯಭಾವದಿಂದ ಕಾಣಬೇಕು. ಯುವಕರು ಜಾಗೃತರಾಗಿದ್ದರೆ ದೇಶಕ್ಕೆ ಕೀರ್ತಿ ಸಿಗುತ್ತದೆ: ಮಲಗದರೆ ದೇಶ ಅವನತಿ ಹೊಂದಿತ್ತದೆ. ಆದ್ದರಿಂದ ಯುವ ಸಮುದಾಯ ಜಾಗೃತರಾಗಿ ದೇಶ ಕಟ್ಟುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಬಾಪೂಜಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಂ. ಬಸವಯ್ಯ ಉದ್ಘಾಟಿಸಿ  ಮಾತನಾಡುತ್ತಾ, ಇಂದಿನ ವಿದ್ಯಾರ್ಥಿಗಳು ತರಗತಿ ಪಠ್ಯಕ್ರಮದ ಜತೆಯಲ್ಲಿ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಅಂದು ಭಾರತೀಯರ ಮೇಲೆ ಬ್ರಿಟಿಷರ ವಿರುದ್ದ ಚಲೇಜಾವ್‌ ಚಳುವಳಿ ನಡೆದಿತ್ತು: ಇಂದು ಶ್ರೀಸಾಮಾನ್ಯರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರದಲ್ಲಿ ನಿರತರಾಗಿರುವ ರಾಜರಾರಣಿಗಳ ವಿರುದ್ಧ ಚಲೇಜಾವ್‌ ಚಳುವಳಿ ನಡೆಸಬೇಕಾಗಿದೆ. ಗಾಂಧೀಜಿಯವರು ಅನ್ಯಾಯ ಕಂಡೊಡನೆ ಪ್ರತಿಭಟನೆ ಮಾಡಿತ್ತಿದ್ದರು. ಆದರೆ ನಾವೆಲ್ಲ ಇಂದು ಅನ್ಯಾಯವನ್ನು ಕಂಡರೂ ಕೂಡ ಪ್ರತಿಭಟಿಸಲಾರದಿರುವ ಮಲಗಿರುವ ಗಾಂಧಿಗಳಾಗಿದ್ದೇವೆ. ಗಾಂದೀಜಿಯವರಂತೆ ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಸಾಗಿ ಆದರ್ಶ ಮತ್ತು ಸದೃಢವಾದ ದೇಶ ಕಟ್ಟಬೆಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಂಶುಪಾಲ ಎಂ.ಎಚ್.‌ ನಾಗರಾಜು ಆಗಮಿಸಿದ್ದರು. ಇಡೀ ಸ್ವಾತಂತ್ರ್ಯ ಹೋರಾಟದ ಚಿತ್ರಣವನ್ನು ಸಂಕ್ಷಿಪ್ತವಾಗಿ ಮನ ಮುಟ್ಟುವಂತೆ ವಿವರಿಸಿದರು.
ನಮ್ಮ ದೇಶದ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಂತೆ, ಭಾರತ ಸ್ವಾತಂತ್ರ್ಯ ಚಳುವಳಿಯ ಚರಿತ್ರೆಯು ಮೂರನೇ ಮಹಾಕಾವ್ಯ ಇದ್ದಂತೆ. ಅದರಲ್ಲಿ ಕ್ವಿಟ್‌ ಇಂಡಿಯ ಚಳವಳಿಯು ಒಂದು ಭಾಗವಾಗಿದೆ. ಬ್ರಿಟಿಷರ ವಿರುದ್ದದ ಆರಂಭದ ಯುದ್ದಗಳು ಹಿಂಸಾತ್ಮಕವಾಗಿದ್ದವು. ಆದರೆ ನಂತರದ ದಿನಗಳಲ್ಲಿ, ವಿಶೇಷವಾಗಿ ಗಾಂಧಿಯುಗದಲ್ಲಿ ಅಹಿಂಸಾತ್ಮಕ ಹೋರಾಟಗಳು ನಡೆದವು. ೧೮೬೦ ರಿಂದ ೧೮೮೫ ರ ವರೆಗಿನ ೨೫ ವರ್ಷಗಳ ಕಾಲವು ಭಾರತೀಯರಲ್ಲಿ ರಾಷ್ಟ್ರೀಯತೆಯನ್ನು ಬಿತ್ತನೆ ಮಾಡಿದ ಕಾಲಘಟ್ಟವಾಗಿದೆ. ಕ್ವಿಟ್‌ ಇಂಡಿಯ ಚಳುವಳಿಯನ್ನು ಕೆಲವು ಕಾಲ ಯಾವುದೇ ನಾಯಕರಿಲ್ಲದೆ ಜನಸಾಮಾನ್ಯರೇ ಮುಂದುವರೆಸಿಕೊಂಡು ಹೋದದ್ದರಿಂದ ಅದು ಶ್ರೀಸಾಮಾನ್ಯರ ಚಳುವಳಿಯಾಗಿತ್ತು ಮತ್ತು ದೇಶವ್ಯಾಪ್ತಿ ಹಬ್ಬಿತು. ಎಂದು ಹಲವಾರು ವಿಷಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಮಾತನಾಡುತ್ತಾ, ಸ್ವಾತಂತ್ರ್ಯ ಹೋರಾಟದಂತಹ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಆಯೋಜಿಸಲು ಸಂಸ್ಥೆಯ ಸದಾ ಸಿದ್ದವಾಗಿರುತ್ತದೆ. ಎಂದು ಹೇಳಿದರು. ಮುಂದುವರೆದು ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ಮೂಲಕ ಬ್ರಿಟಿಷರನ್ನು ನಡುಗಿಸಿದ್ದರು. ಈಗಿನ ಪೀಳಿಗೆಯವರು ಅಂತಹ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡು ರಾಷ್ಟ್ರೀಯತೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಭಾರತ ಸೇವಾದಳ ಅಭಿಮಾನಿ ಬಳಗದ ಪದಾಧಿಕಾರಿಗಳು, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ್‌, ಪ್ರಾಂಶುಪಾಲ ಡಾ. ಜಗದೀಶ ಜಿ.ಟಿ., ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕರಾದ ಪ್ರೊ. ನಿವೇದಿತಾ,   ಪ್ರೊ. ಮನೋಹರ್ , ಕಾಲೇಜಿನ ಭೊದಕ ಸಿಬ್ಬಂದಿ ಮತ್ತು  ವಿದ್ಯಾರ್ಥಿ ಗಳು ಪಾಲ್ಗೊಂಡಿದ್ದರು.