Saturday, 14th December 2024

ರಾಜ್ಯಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆ

ಮಾನ್ವಿ: ಪಟ್ಟಣದ ಪ್ರಾರ್ಥನಾ ದತ್ತಿ ಸಂಸ್ಥೆಯ 2022ನೇ ಸಾಲಿನ ರಾಜ್ಯಮಟ್ಟದ ಸಾಹಿತ್ಯ ಪುರಸ್ಕಾರಕ್ಕೆ ಸಾಹಿತಿ ಚಿದಾನಂದ ಸಾಲಿ, ಕವಿಗಳಾದ ಚೈತ್ರಾ ಶಿವಯೋಗಿಮಠ ಹಾಗೂ ಸಿದ್ದು ಸತ್ಯಣ್ಣವರ ಆಯ್ಕೆಯಾಗಿದ್ದಾರೆ.

ಪ್ರಾರ್ಥನಾ ದತ್ತಿ ಸಂಸ್ಥೆಯ ವತಿಯಿಂದ 2022ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಕಥಾ ಸಂಕಲನ ಹಾಗೂ ಕವನ ಸಂಕಲನ ಗಳನ್ನು ಪ್ರಶಸ್ತಿಗಾಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ಆಹ್ವಾನಿಸಲಾಗಿತ್ತು. ಅತ್ಯುತ್ತಮ ಕಥಾ ಸಂಕಲನ ಪ್ರಶಸ್ತಿಗೆ ಚಿದಾನಂದ ಸಾಲಿ ರಚಿಸಿರುವ ‘ ಹೊಗೆಯ ಹೊಳೆಯಿದು ತಿಳಿಯದು’ ಆಯ್ಕೆಯಾದರೆ ಅತ್ಯುತ್ತಮ ಕವನ ಸಂಕಲನ ಪ್ರಶಸ್ತಿಯನ್ನು ಚೈತ್ರಾ ಶಿವಯೋಗಿಮಠ ಅವರ ‘ ಪೆಟ್ರಿಕೋರ್’ ಮತ್ತು ಸಿದ್ದು ಸತ್ಯಣ್ಣವರ ಅವರ ‘ ಗಾಳಿಯ‌ ಮಡಿಲು’ ಕೃತಿಗಳು ಹಂಚಿಕೊಂಡಿವೆ.

ಕಥಾ ವಿಭಾಗದಲ್ಲಿ ಮೈಸೂರಿನ ಹಿರಿಯ ಸಾಹಿತಿ ಜಿ.ಪಿ.ಬಸವರಾಜು ಹಾಗೂ ಕತೆಗಾರ ಟಿ.ಎಸ್.ಗೊರವರ ತೀರ್ಪುಗಾರರಾಗಿ ದ್ದರು. ಕಾವ್ಯ ವಿಭಾಗದಲ್ಲಿ ಸಾಹಿತಿಗಳಾದ ವಿಕ್ರಮ್ ವಿಸಾಜಿ ಹಾಗೂ ಸಬಿತಾ‌ ಬನ್ನಾಡಿ ಅವರು ತೀರ್ಪುಗಾರರಾಗಿದ್ದರು.‌

ಮಾರ್ಚ್ ತಿಂಗಳಲ್ಲಿ ಮಾನ್ವಿ ಪಟ್ಟಣದಲ್ಲಿ ನಡೆಯುವ ಪ್ರಾರ್ಥನಾ ದತ್ತಿ ಸಂಸ್ಥೆಯ ರಾಜ್ಯಮಟ್ಟದ ಸಾಹಿತ್ಯ ಪುರಸ್ಕಾರ ಸಮಾರಂಭದಲ್ಲಿ ಅತ್ಯುತ್ತಮ ಕಥಾ ಸಂಕಲನ ಪ್ರಶಸ್ತಿಗೆ ಆಯ್ಕಯಾದ ಚಿದಾನಂದ ಸಾಲಿ ಅವರಿಗೆ ರೂ.10ಸಾವಿರ‌ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ. ಅತ್ಯುತ್ತಮ ಕವನ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿರುವ ಚೈತ್ರಾ ಶಿವಯೋಗಿಮಠ ಹಾಗೂ ಸಿದ್ದು ಸತ್ಯಣ್ಣನವರ ಅವರಿಗೆ ತಲಾ ರೂ.5ಸಾವಿರ‌ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಪ್ರಾರ್ಥನಾ ದತ್ತಿ ಸಂಸ್ಥೆಯ ಅಧ್ಯಕ್ಷ ಡಾ.ಯಂಕನಗೌಡ ಬೊಮ್ಮನಹಾಳ ಹಾಗೂ ಸಂಚಾಲಕ ಬಸವರಾಜ ಭೋಗಾವತಿ ತಿಳಿಸಿದ್ದಾರೆ.